ಬೆಂಗಳೂರು, ಎಪ್ರಿಲ್ 23, 2026 (ಕರಾವಳಿ ಟೈಮ್ಸ್) : 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಗುರುವಾರ (ಎಪ್ರಿಲ್ 23) ಮಧ್ಯಾಹ್ನ 12 ಗಂಟೆಗೆ ಪ್ರಕಟಿಸಲಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಇತಿಹಾಸದಲ್ಲೇ ಅತೀ ಹೆಚ್ಚಿನ ಫಲಿತಾಂಶ ಬಂದಿದ್ದು, ಶೇ. 94.10 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ದಕ್ಷಿಣ ಕನ್ನಡ ಮೊದಲ ಸ್ಥಾನ ಪಡೆದರೆ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ ಸ್ಥಾನ ಪಡೆದುಕೊಂಡಿದೆ. ಕಲಬುರ್ಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.
ಕಳೆದ ವರ್ಷ ಶೇ. 66.14 ಫಲಿತಾಂಶ ದಾಖಲಾಗಿತ್ತು. ಈ ಬಾರಿ ಫಲಿತಾಂಶ ಏರಿಕೆಯಾಗಿದೆ. ಇದಕ್ಕೂ ಮುನ್ನ ವೆಬ್ ಸೈಟ್‍ನಲ್ಲಿ 11.50ಕ್ಕೆ ಫಲಿತಾಂಶ ಪ್ರಕಟವಾಗಿ, ವಿದ್ಯಾರ್ಥಿಗಳು ಎಸ್ ಎಂ ಎಸ್ ಮೂಲಕವೂ ಫಲಿತಾಂಶ ಪಡೆದುಕೊಂಡಿದ್ದಾರೆ. ಈ ಬಾರಿ ಫಲಿತಾಂಶ ಶೇಕಡಾವಾರು ಹೆಚ್ಚಳವಾಗುವ ನಿರೀಕ್ಷೆ ಮಾಡಲಾಗಿತ್ತು. ಅದಕ್ಕಾಗಿ ಶಿಕ್ಷಣ ಇಲಾಖೆ ಜಿಲ್ಲಾ ಮಟ್ಟದಲ್ಲೇ ಸಾಕಷ್ಟು ಪ್ರಯತ್ನಗಳನ್ನು ಮಾಡಿತ್ತು. ಅದರಂತೆ ಐತಿಹಾಸಿಕ ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 7,70,209 ವಿದ್ಯಾರ್ಥಿಗಳ ಪೈಕಿ 7,26,704 ವಿದ್ಯಾರ್ಥಿಗಳು ಪಾಸಾಗಿದ್ದಾರೆ ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ.
ಈ ಬಾರಿ ಫಲಿತಾಂಶವನ್ನು ನಿಗದಿಗಿಂತ ಒಂದು ದಿನ ಮುಂಚಿತವಾಗಿ ಪ್ರಕಟಿಸಲಾಗಿದೆ. ಈ ವರ್ಷ ಮೊದಲ ಬಾರಿಗೆ ಡಿಜಿಲಾಕರ್ ಮೂಲಕ ಅಂಕಪಟ್ಟಿ ಡೌನ್‍ಲೋಡ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಇಲಾಖಾ ವೆಬ್ ಸೈಟ್ https://karresults.nic.in ಮೂಲಕ ಫಲಿತಾಂಶ ವೀಕ್ಷಿಸಬಹುದು.











0 comments:
Post a Comment