ಬಂಟ್ವಾಳ, ಎಪ್ರಿಲ್ 15, 2026 (ಕರಾವಳಿ ಟೈಮ್ಸ್) : ಎಪ್ರಿಲ್ 28 ರಂದು ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಬೃಹತ್ ಜನಾಂದೋಲನ ಮೆರವಣಿಗೆ ನಡೆಸಲು ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಎಪ್ರಿಲ್ 15 ರಂದು ಬುಧವಾರ ಬಂಟ್ವಾಳದಲ್ಲಿ ಮಾಜಿ ಸಚಿವ ಹಾಗೂ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿಯ ಗೌರವಾಧ್ಯಕ್ಷ ಬಿ ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಸಭೆಯಲ್ಲಿ ಬಂಟ್ವಾಳ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸಮಿತಿ ಸಂಚಾಲಕರುಗಳಾದ ಬಿ ಶೇಖರ್ ಮತ್ತು ಮೋಹನ್ ಶೆಟ್ಟಿ ಅವರು ಪ್ರಸ್ತಾವನೆಗೈದರು. ಟೋಲ್ ಗೇಟ್ ತೆರವಿಗಾಗಿ ಈ ಹಿಂದಿನ ಎರಡು ಹಂತಗಳಲ್ಲಿ ನಡೆದ ಕಾರ್ಯಕ್ರಮಗಳು ಬೀರಿರುವ ಪರಿಣಾಮಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ಎಪ್ರಿಲ್ 28 ರಂದು ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಬ್ರಹ್ಮರಕೂಟ್ಲು ಟೋಲ್ ಗೇಟ್ ವರಗೆ ‘ಜನಾಂದೋಲನ ನಡಿಗೆ’ ಮೆರವಣಿಗೆ ನಡೆಸುವುದು ಎಂದು ತೀರ್ಮಾನಿಸಲಾಯಿತು. ಸಂಜೆ 4 ಗಂಟೆಗೆ ಜನಾಂದೋಲನ ನಡಿಗೆಗೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಲ್ಲಿ ಚಾಲನೆ ನೀಡಲಾಗುವುದು. ಸಂಜೆ 5.3.0 ಗಂಟೆಗೆ ಟೋಲ್ ಗೇಟ್ ಬಳಿ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ರಮಾನಾಥ ರೈ ಹಾಗೂ ಟೋಲ್ ಗೇಟ್ ವಿರೋಧಿ ಹೋರಾಟಗಾರ ಮುನೀರ್ ಕಾಟಿಪಳ್ಳ ಜನಾಂದೋಲನ ಮೆರವಣಿಗೆಯ ರೂಪುರೇಷೆಗಳ ಕುರಿತು ಸಭೆಗೆ ವಿವರಿಸಿದರು.
ಸಭೆಯಲ್ಲಿ ಭಾಗಿಗಳಾಗಿದ್ದ ಹಲವು ಪ್ರಮುಖರು ತಮ್ಮ ಸಲಹೆಗಳನ್ನು ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಿದ್ದತಾ ಸಭೆ ನಡೆಸಲಾಗುವುದು ಹಾಗೂ ಬಂಟ್ವಾಳದ ಪ್ರಮುಖ ಪೇಟೆಗಳಲ್ಲಿ ಹೋರಾಟ ಸಮಿತಿ ವತಿಯಿಂದ ಜನರನ್ನು ನೇರವಾಗಿ ಸಂಪರ್ಕಿಸುವ ಮೂಲಕ ಪ್ರಚಾರ ನಡೆಸುವುದು, ತಾಲೂಕಿನ ಎಲ್ಲಾ ಜನಪರ ಸಂಘ ಸಂಸ್ಥೆಗಳು, ಸಾರಿಗೆ ಯೂನಿಯನ್ ಗಳು, ಸಾಮಾಜಿಕ ಸಂಘ ಸಂಸ್ಥೆಗಳ ಬೆಂಬಲ ಪಡೆಯುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಬಂಟ್ವಾಳ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿಯ ಸಂಚಾಲಕ ಮೋಹನ್ ಶೆಟ್ಟಿ ಪಂಜಿಕಲ್ಲು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ವಂದಿಸಿದರು.



















0 comments:
Post a Comment