ಬಂಟ್ವಾಳ, ಎಪ್ರಿಲ್ 25, 2026 (ಕರಾವಳಿ ಟೈಮ್ಸ್) : ಕಬ್ಬಿಣದ ದೋಂಟಿಯಿಂದ ತೆಂಗಿನ ಕಾಯಿ ಕೀಳುತ್ತಿದ್ದ ವೇಳೆ ವಿದ್ಯುತ್ ಪ್ರಸಾರವಾಗುತ್ತಿದ್ದ ತಂತಿ ತಾಗಿ ವಿದ್ಯುತ್ ಸ್ಪರ್ಶದಿಂದ ಶಾಲಾ ಬಾಲಕನೋರ್ವ ಮೃತಪಟ್ಟ ದಾರುಣ ಘಟನೆ ಕೆದಿಲ ಗ್ರಾಮದ ಗಡಿಯಾರ ಎಂಬಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಮೃತ ಬಾಲಕನನ್ನು ನೇರಳಕಟ್ಟೆ ಸಮೀಪದ ಗಣೇಶ ಬಾಡಿಗೆ ಮನೆಯಲ್ಲಿ ವಾಸವಿರುವ ಶರೀಫ್ ಅವರ ಪುತ್ರ ಶಹೀರ್ (15) ಎಂದು ಹೆಸರಿಸಲಾಗಿದೆ.
ಈ ಬಗ್ಗೆ ಮೃತ ಬಾಲಕನ ಅಜ್ಜ ಜಿ ಮಾಯಬ್ಬ ಅಲಿಯಾಸ್ ಪುತ್ತಾಕ (67) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರ ಮನೆಯ ಎದುರು ಅಬ್ಬಾಸ್ ಎಂಬವರ ಜಾಗದಲ್ಲಿ ತೆಂಗಿನ ಮರಗಳಲ್ಲಿದ್ದ ತೆಂಗಿನ ಕಾಯಿಗಳನ್ನು ಪುತ್ತಾಕ, ನೇರಳಕಟ್ಟೆಯ ಉಸ್ಮಾನ್ ಹಾಗೂ ಮೊಮ್ಮಗ ಮುಹಮ್ಮದ್ ಶಹೀರ್ ಜೊತೆಯಲ್ಲಿ ಕೀಳುತ್ತಿದ್ದಾಗ, ಮೊಮ್ಮಗ ಮುಹಮ್ಮದ್ ಶಹೀರ್ ಕಬ್ಬಿಣದ ದೋಂಟಿಯಿಂದ ತೆಂಗಿನ ಮರದಿಂದ ಕಾಯಿಯನ್ನು ಕೀಳಲು ಯತ್ನಿಸಿರುತ್ತಾನೆ. ಆ ವೇಳೆ ಆಕಸ್ಮಿಕವಾಗಿ ಕಬ್ಬಿಣದ ದೋಂಟಿಯು ವಿದ್ಯುತ್ ಪ್ರಸಾರವಾಗುತ್ತಿದ್ದ ತಂತಿಗೆ ತಾಗಿ ವಿದ್ಯುತ್ ಪ್ರವಹಿಸಿರುತ್ತದೆ. ಪರಿಣಾಮ ಮುಹಮ್ಮದ್ ಶಹೀರ್ ದೋಂಟಿ ಸಮೇತ ನೆಲಕ್ಕೆ ಬಿದ್ದಿದ್ದು, ವಿದ್ಯುತ್ ಸ್ಪರ್ಶಗೊಂಡ ಕಾರಣ ದೇಹದಲ್ಲಿ ಸುಟ್ಟ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
ಮೃತ ಬಾಲಕ ಶಹೀರ್ ಪುತ್ತೂರು ಮೌಂಟೇನ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯಾಗಿದ್ದು, ಇತ್ತೀಚೆಗೆ ಬಂದ ಫಲಿತಾಂಶದಲ್ಲಿ ತೇರ್ಗಡೆಗೊಂಡಿರುತ್ತಾನೆ ಎನ್ನಲಾಗಿದೆ. ಈತ ಶಾಲಾ ರಜೆಯ ಹಿನ್ನಲೆಯಲ್ಲಿ ಗಡಿಯಾರದಲ್ಲಿರುವ ಅಜ್ಜನ ಮನೆಗೆ ತೆರಳಿದ್ದ. ಮೃತ ಶಹೀರ್ ತಂದೆ, ತಾಯಿ, ತಮ್ಮ, ಇಬ್ಬರು ಸಹೋದರಿಯರ ಸಹಿತ ಬಂಧುಗಳನ್ನು ಅಗಲಿದ್ದಾನೆ.











0 comments:
Post a Comment