ಬಂಟ್ವಾಳ, ಎಪ್ರಿಲ್ 09, 2026 (ಕರಾವಳಿ ಟೈಮ್ಸ್) : ಸಮಾನ ಮನಸ್ಕ ಸಂಘಟನೆಯ ಸಮನ್ವಯ ಸಮಿತಿ ಬಂಟ್ವಾಳ ಇದರ 10ನೇ ವಾರ್ಷಿಕ ಮಹಾಸಭೆಯು ಬಿ ಸಿ ರೋಡು ಪ್ರೀತಿ ಕಾಂಪ್ಲೆಕ್ಸ್ ಎಪ್ರಿಲ್ 8 ರಂದು ನಡೆದಿದ್ದು, ಅಧ್ಯಕ್ಷರಾಗಿ ಮೋಹನ್ ಶೆಟ್ಟಿ ಪಂಜಿಕಲ್ಲು ಅವರು 3ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ರಾಜಾ ಚಂಡ್ತಿಮಾರ್, ಉಪಾಧ್ಯಕ್ಷರುಗಳಾಗಿ ಸೀತಾರಾಮ ಶೆಟ್ಟಿ ಕಾಂತಾಡಿಗುತ್ತು, ಕೇಶವ ಪೂಜಾರಿ, ಲೋಕೇಶ್ ಸುವರ್ಣ, ಜಗನ್ನಾಥ ಬಂಟ್ವಾಳ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಕುಮಾರ್, ಸಹ ಕಾರ್ಯದರ್ಶೀಗಳಾಗಿ ಮ್ಯಾಥ್ಯೂ ಒ ಸಿ, ಶ್ರೀನಿವಾಸ ಭಂಡಾರಿ, ಮುಹಮ್ಮದ್ ನಂದಾವರ, ಪ್ರೇವiನಾಥ್ ಕೆ ಕೋಶಾಧಿಕಾರಿಯಾಗಿ ಮ್ಯಾಕ್ಷಿಂ ಡಿಸೋಜಾ, ಸಂಘಟನಾ ಕಾರ್ಯದರ್ಶಿಯಾಗಿ ಸಾಧಿಕ್ ಬಂಟ್ವಾಳ್, ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಉಮ್ಮರ್ ಸಾಲೆತ್ತೂರು ಅವರು ಆಯ್ಕೆಯಾದರು.
ಇದೇ ವೇಳೆ ಜನಪರ ಚಳುವಳಿಗಳಿಗೆ ಪೂರಕವಾಗಿ ಕೆಲವೊಂದು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮುಖ್ಯವಾಗಿ ಕಳೆದ 23 ವರ್ಷಗಳಿಂದ ಅವಧಿ ಮೀರಿರುವ, ಅಂತರದ ನಿಯಮಗಳನ್ನು ಉಲ್ಲಂಘಿಸಿ ಕಾರ್ಯಾಚರಿಸುತ್ತಿರುವ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವುಗೊಳಿಸಲು ಈಗಾಗಲೇ ಹೋರಾಟಗಳು ಆರಂಭಗೊಂಡಿದ್ದು ಈ ಟೋಲ್ ಗೇಟ್ ತೆರವು ಆಗುವ ತನಕ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರುವು ಹೋರಾಟ ಸಮಿತಿ ಹಮ್ಮಿಕೊಳ್ಳುವ ಯಾವುದೇ ಗಂಭೀರ ಸ್ವರೂಪದ ಹೋರಾಟದಲ್ಲಿ ಟೋಲ್ ಗೇಟ್ ತೆರವಾಗದೇ ವಿರಮಿಸುವ ಪ್ರಶ್ನೆಯೇ ಇಲ್ಲ ಎಂದು ನಿರ್ಣಯಿಸಲಾಯಿತು.
ಸಭೆಯನ್ನುದೇಶಿಸಿ ಸಂಘಟನೆಯ ಗೌರವಾಧ್ಯಕ್ಷ ರಾಜಾ ಚಂಡ್ತಿಮಾರ್, ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ ಸಂಚಾಲಕ ಬಿ ಶೇಖರ್, ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಮಾತನಾಡಿದರು.
ಕಾರ್ಯದರ್ಶಿ ಸುರೇಶ್ ಕುಮಾರ್ ಅವರು ಗತ ವರ್ಷದ ಚಟುವಟಿಕಾ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿ, ಸ್ವಾಗತಿಸಿದರು. ಸಹಕಾರ್ಯದರ್ಶಿ ಪ್ರೇಮನಾಥ ಕೆ ವಂದಿಸಿದರು.




















0 comments:
Post a Comment