ಬಂಟ್ವಾಳದಲ್ಲಿ ಸಂಭ್ರಮದ ಬಕ್ರಿದ್ ಆಚರಣೆ
ಬಂಟ್ವಾಳ, ಮೇ 29, 2026 (ಕರಾವಳಿ ಟೈಮ್ಸ್) : ಪ್ರವಾದಿ ಹಝ್ರತ್ ಇಬ್ರಾಹಿಂ ನೆಬಿ ಅಲೈಹಿಸ್ಸಲಾಂ ಹಾಗೂ ಅವರ ಕುಟುಂಬ ದೇವನ ಸಂಪ್ರಿತಿಗಾಗಿ ಮಾಡಿದ ತ್ಯಾಗ, ಸಹಿಸಿದ ಕಷ್ಟ-ಸಂಕಷ್ಟಗಳು ನಮಗೆ ಮಾದರಿಯಾಗಿ ಆಧ್ಯಾತ್ಮಿಕ ನೆಲೆಯಲ್ಲಿ ಜೀವಿಸಲು ಪವಿತ್ರ ಬಕ್ರೀದ್ ಹಬ್ಬ ಪ್ರೇರಣೆಯಾಗಲಿ ಎಂದು ಪಾಣೆಮಂಗಳೂರು-ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಹಾಜಿ ಬಿ ಎಚ್ ಅಬೂಸ್ವಾಲಿಹ್ ಉಸ್ತಾದ್ ಹೇಳಿದರು.
ಬಕ್ರೀದ್ ಹಬ್ಬದ ಪ್ರಯುಕ್ತ ಮಸೀದಿಯಲ್ಲಿ ಗುರುವಾರ ನಡೆದ ಈದ್ ನಮಾಝ್ ಹಾಗೂ ಖುತುಬಾ ಪಾರಾಯಣಕ್ಕೆ ನೇತೃತ್ವದ ನೀಡಿದ ಬಳಿಕ ಈದ್ ಸಂದೇಶ ನೀಡಿದ ಅವರು, ಬಕ್ರೀದ್ ಆಚರಣೆಯು ಅಲ್ಲಾಹನ ನಾಮಸ್ಮರಣೆಯ ಮೂಲಕ ಧನ್ಯಗೊಳಿಸಬೇಕಾಗಿದೆ ಎಂದರು.
ಲೋಕಾಡಂಬರದಲ್ಲಿ ಜೀವಿಸುತ್ತಿರುವ ನಾವುಗಳು ಯಾವತ್ತೂ ಧಾರ್ಮಿಕ ಚೌಕಟ್ಟನ್ನು ಮೀರಿ ನಡೆಯುವಂತಾಗಬಾರದು. ನಮ್ಮಿಂದ ವಿವಿಧ ಕಾರಣಗಳಿಂದ ವಿವಿಧ ರೂಪದಲ್ಲಿ ಸಾಮಾನ್ಯವಾಗಿ ಹಾಗೂ ಅಕಾಲಿಕವಾಗಿ ಮರಣ ಹೊಂದಿದವರನ್ನು ಸದಾ ನೆನಪಿಸಿಕೊಳ್ಳುವ ಮೂಲಕ ಜೀವನ ನಡೆಸಿದರೆ ಆಡಂಬರ ಬದುಕಿಗೆ ನಿಯಂತ್ರಣ ಹೇರಲು ಸಾಧ್ಯವಿದೆ ಎಂದವರು ಅಭಿಪ್ರಾಯಪಟ್ಟರು.
ಹಬ್ಬದ ಸಂಭ್ರಮದ ಜೊತೆಗೆ ಆರ್ಥಿಕವಾಗಿ ಬಡವರಾಗಿರುವ ಮಂದಿಗಳ ಜೊತೆ ಪರಸ್ಪರ ಸಹಕಾರ ಮನೋಭಾವ ತೋರುವ ಮೂಲಕ ಕಾರುಣ್ಯದ ಜೀವನ ನಡೆಸಬೇಕಾಗಿದೆ ಎಂದು ಉಸ್ತಾದ್ ಇದೇ ವೇಳೆ ಕರೆ ನೀಡಿದರು. ವಿಶೇಷ ಪ್ರಾರ್ಥನೆ ಬಳಿಕ ಜಮಾಅತ್ ಬಾಂಧವರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.























0 comments:
Post a Comment