ಕಡಬ, ಮೇ 31, 2026 (ಕರಾವಳಿ ಟೈಮ್ಸ್) : ತಾಲೂಕಿನ ಸವಣೂರು ಗ್ರಾಮದ ಮಾಂತೂರು-ಮುಂಡತಡ್ಕ ಎಂಬಲ್ಲಿನ ತೋಟದಲ್ಲಿ ನಡೆಯುತ್ತಿದ್ದ ಅಕ್ರಮ ಗೋವಧಾ ಸ್ಥಳಕ್ಕೆ ದಾಳಿ ನಡೆಸಿದ ಬೆಳ್ಳಾರೆ ಪೊಲೀಸರು ಜಾನುವಾರು ಮಾಂಸ ಸಹಿತ ಮೂವರನ್ನು ಬಂಧಿಸಿದ ಘಟನೆ ಮೇ 29 ರಂದು ಸಂಜೆ ವೇಳೆ ನಡೆದಿದೆ.
ಬಂಧಿತ ಆರೋಪಿಗಳನ್ನು ಕೆ ಅಬ್ದುಲ್ ರಫೀಕ್ (37), ಅದ್ರಾಮ ಮಾಂತೂರು (41) ಹಾಗೂ ಅಬ್ದುಲ್ ಖಾದರ್ ಪಣೆಮಜಲು (57) ಎಂದು ಹೆಸರಿಸಲಾಗಿದೆ.
ಮೇ 29 ರಂದು ಸಂಜೆ ಅಕ್ರಮ ಗೋವಧೆ ನಡೆಯುತ್ತಿರುವ ಬಗ್ಗೆ ಬೆಳ್ಳಾರೆ ಠಾಣಾ ಪಿಎಸ್ಸೈ ಸಂತೋಷ್ ಬಿ ಪಿ ಅವರಿಗೆ ಮಾಹಿತಿ ಬಂದ ಮೇರೆಗೆ, ಸಿಬ್ಬಂದಿಗಳೊಂದಿಗೆ ಮಾಹಿತಿ ಬಂದ ಸ್ಥಳವಾದ ಕಡಬ ಸವಣೂರು ಗ್ರಾಮದ ಮಾಂತೂರು ಮುಂಡತಡ್ಕ ಎಂಬಲ್ಲಿಗೆ ತೆರಳಿ ಪರಿಶೀಲಿಸಿದಾಗ, ತೋಟವೊಂದರಲ್ಲಿ ಜಾನುವಾರನ್ನು ವಧೆ ಮಾಡಿ ಮಾಂಸ ಮಾಡುತ್ತಿರುವುದು ಕಂಡುಬಂದಿದೆ. ಸ್ಥಳದಲ್ಲಿದ್ದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಯಾವುದೇ ಪರವಾನಿಗೆ ಪಡೆಯದೇ ಅಕ್ರಮವಾಗಿ ಗೋವಧೆ ನಡೆಸಿ ಮಾಂಸ ಮಾಡುತ್ತಿರುವುದು ದೃಢಪಟ್ಟಿದೆ. ಸ್ಥಳದಲ್ಲಿದ್ದ ಜಾನುವಾರು ಮಾಂಸ, ಇತರೆ ಸೊತ್ತುಗಳನ್ನು ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದು ಬೆಳ್ಳಾರೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
























0 comments:
Post a Comment