ಬಂಟ್ವಾಳ, ಮೇ 21, 2026 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿ ‘ಕುಲಾಲ ಕ್ರೀಡೋತ್ಸವ 2026’ ಮೇ 24 ರಂದು ಪೆÇಸಳ್ಳಿ ಕುಲಾಲ ಭವನದ ವಠಾರದಲ್ಲಿ ನಡೆಯಲಿದೆ. ಕ್ರೀಡಾಕೂಟಕ್ಕೆ ಉದ್ಯಮಿ ಶೋಭಾ ಜಯಪ್ರಕಾಶ್ ಚಾಲನೆ ನೀಡಲಿದ್ದು, ಸಭಾ ಕಾರ್ಯಕ್ರಮವನ್ನು ಎಚ್ ಪಿ ಸಿ ಎಲ್ ಉದ್ಯೋಗಿ ನಾರಾಯಣ ಮೂಲ್ಯ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಬಿ ರಮೇಶ್ ಸಾಲಿಯಾನ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಕೋ-ಆರ್ಡಿನೇಟರ್ ತೇಜಸ್ವಿರಾಜ್, ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಅನಿಲ್ ದಾಸ್, ಉದ್ಯಮಿ ಸುಂದರ ಕುಲಾಲ್, ಉದ್ಯಮಿ ಹರಿಯಪ್ಪ, ಟೈಲರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಸುರೇಶ್ ಸಾಲಿಯಾನ್ ಹಾಗೂ ಬಿ ಸಿ ರೋಡು ರಕ್ತೇಶ್ವರಿ ದೇವಿ ದೇವಸ್ಥಾನದ ಅಧ್ಯಕ್ಷ ಮೋಹನ್ ಬಿ ಭಾಗವಹಿಸಲಿದ್ದಾರೆ.
ಈ ಬಾರಿಯ ಕ್ರೀಡೋತ್ಸವದಲ್ಲಿ ಒಂದು ವರ್ಷದ ಪುಟಾಣಿಗಳಿಂದ ಹಿಡಿದು ಹಿರಿಯ ನಾಗರಿಕರ ತನಕ ಎಲ್ಲ ವಯೋಮಾನದವರಿಗೂ ವಿಶೇಷ ಆಟೋಟ ಸ್ಪರ್ಧೆಗಳು ಆಯೋಜಿಸಲಾಗಿದ್ದು, ದಿನಪೂರ್ತಿ ಕ್ರೀಡಾ ಸಂಭ್ರಮ ನಡೆಯಲಿದೆ. ಮಕ್ಕಳಿಗಾಗಿ ಮನರಂಜನಾ ಆಟಗಳು, ಯುವಕರಿಗಾಗಿ ಚುರುಕು ಮೂಡಿಸುವ ಸ್ಪರ್ಧೆಗಳು, ಮಹಿಳೆಯರಿಗಾಗಿ ವಿನೂತನ ಆಟಗಳು, ದಂಪತಿಗಳಿಗಾಗಿ ವಿಶೇಷ ಸ್ಪರ್ಧೆಗಳು ಹಾಗೂ ಹಿರಿಯರಿಗಾಗಿ ಸಂತಸ ತುಂಬುವ ಚಟುವಟಿಕೆಗಳು ನಡೆಯಲಿದೆ.
ಬಲೂನ್ ಗೇಮ್ಸ್, ಕ್ಪಾಪ್ ಬಾಲ್, ಒಂಟಿಕಾಲಿನ ಹಗ್ಗಜಗ್ಗಾಟ, ಐಸ್ ಕ್ರೀಂ ತಿನ್ನುವ ಸ್ಪರ್ಧೆ, ಶೋಲ್ಡರ್ ಬಾಲ್ ಪಾಸಿಂಗ್, ಮುಂಡಾಸ್ ಕಟ್ಟುವ ಸ್ಪರ್ಧೆ, ತೆಂಗಿನಗರಿ ಮೊಡಯುವುದು, ಕಣ್ಣಾಮುಚ್ಚಾಲೆ, ಮಿನಿ ಕ್ರಿಕೆಟ್, ಕ್ರೇಜಿ ಗೇಮ್ಸ್ ಸೇರಿದಂತೆ ಸುಮಾರು ಎಂಬತಕ್ಕೂ ಅಧಿಕ ಆಟೋಟ ಸ್ಪರ್ಧೆಗಳು ಬೆಳಿಗ್ಗೆಯಿಂದ ಸಂಜೆವರೆಗೆ ನಡೆಯಲಿದೆ. ಸಮಾಜದ ಸದಸ್ಯರ ಪರಸ್ಪರ ಬಾಂಧವ್ಯ ವೃದ್ಧಿಸುವ ಹಾಗೂ ಕುಟುಂಬ ಸಮೇತರಾಗಿ ಒಂದೇ ವೇದಿಕೆಯಲ್ಲಿ ಸೇರಿಸುವ ಉದ್ದೇಶದಿಂದ ಕ್ರೀಡೋತ್ಸವವನ್ನು ಆಯೋಜಿಸಲಾಗಿದೆ. ಸಮಾಜದ ಎಲ್ಲಾ ಸದಸ್ಯರು ಕುಟುಂಬ ಸಮೇತರಾಗಿ ಭಾಗವಹಿಸಿ ಕ್ರೀಡೋತ್ಸವವನ್ನು ಯಶಸ್ವಿಗೊಳಿಸುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಯಾದವ ಅಗ್ರಬೈಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











0 comments:
Post a Comment