ಮಂಗಳೂರು, ಮೇ 16, 2026 (ಕರಾವಳಿ ಟೈಮ್ಸ್) : ಕರ್ನಾಟಕ ಗೇರು ಅಭಿವೃದ್ದಿ ನಿಗಮದ ನಿಯಮಿತ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ಗೇರು ಮೇಳ ಹಾಗೂ ಕಾರ್ಯಾಗಾರವು ಮೇ 17 ಹಾಗೂ 18 ರಂದು ಮಂಗಳೂರು ಕದ್ರಿ ಉದ್ಯಾನವನದಲ್ಲಿ ನಡೆಯಲಿದೆ ಎಂದು ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಮತಾ ಡಿ ಎಸ್ ಗಟ್ಟಿ ಹೇಳಿದರು.
ಶುಕ್ರವಾರ ಮಧ್ಯಾಹ್ನ ನಿಗಮದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 17 ರಂದು ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ವಿಧಾನಸಬಾ ಸ್ಪೀಕರ್ ಯು ಟಿ ಖಾದರ್ ಫರೀದ್ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಉಪಸ್ಥಿತಿಯಲ್ಲಿ ರಾಜ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಉದ್ಘಾಟಿಸುವರು. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ರಾಜ್ಯಸಭಾ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರು, ವಿಧಾನ ಪರಿಷತ್ ಸದಸ್ಯರು ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದ ಅವರು, ಮೇ. 17, 18 ರಂದು ಗೋಡಂಬಿ ಕೃಷಿಯ ಬಗ್ಗೆ ತಾಂತ್ರಿಕ ಕಾರ್ಯಾಗಾರ ನಡೆಯಲಿದ್ದು, ಐಸಿಎಆರ್ ನಿರ್ದೇಶಕ, ಪುತ್ತೂರು ಡಿಸಿಆರ್ ಮತ್ತು ಪ್ರಧಾನ ವಿಜ್ಞಾನಿ (ತೋಟಗಾರಿಕೆ) ಡಾ. ಜೆ. ದಿನಕರ ಅಡಿಗ ಅವರು ಗೇರು ಬೇಸಾಯದಲ್ಲಿ ಆಧುನಿಕ ತಂತ್ರಜ್ಞಾನಗಳು ಎಂಬ ವಿಷಯದಲ್ಲಿ ಮಾಹಿತಿ ನೀಡುವರು. ತೋಟಗಾರಿಕೆ ಹಿರಿಯ ವಿಜ್ಞಾನಿ ಡಾ. ವೀಣಾ ಜಿ.ಎಲ್. ಗೌಡ ಅವರು ಗೇರು ಹಣ್ಣಿನ ಸಂಸ್ಕರಣೆ ಮತ್ತು ಮೌಲ್ಯ ವರ್ಧನೆ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. ಪ್ರಗತಿಪರ ಕೃಷಿಕ ಕಡಮಜಲು ಸುಭಾಶ್ ರೈ ಅವರು ಗೇರು ಕೃಷಿಯ ಬಗ್ಗೆ ಸ್ವ ಅನುಭವ ಹಂಚಿಕೊಳ್ಳಲಿದ್ದಾರೆ. ಕೃಷಿಕ ಹಾಗೂ ಗೇರು ಸಂಸ್ಕರಣೆಗಾರ ವಿಶ್ವಕೇಶವ ಅವರು ಗೋಡಂಬಿ ಹಾಗೂ ಗೇರು ಸಂಸ್ಕರಣೆಯ ಕಡೆಗೆ ನನ್ನ ಪಯಣ ಎಂಬ ಬಗ್ಗೆ ಅನುಭವ ವಿನಿಮಯ ನಡೆಯಲಿದೆ ಎಂದರು.
ಎರಡನೆ ದಿನ ಮೇ 18 ರಂದು ನಡೆಯುವ ತಾಂತ್ರಿಕ ಅಧಿವೇಶನದಲ್ಲಿ ಕಲ್ಬಾವಿ ಕನ್ಸ್ಯೂಮರ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಇದರ ನಿರ್ದೇಶಕ ಪ್ರಕಾಶ್ ಕಲ್ಭಾವಿ ಅವರು ಗೋಡಂಬಿ ಕೃಷಿ ಆತ್ಮ ನಿರ್ಭರ್-2035 ವಿಷಯ ಮಂಡನೆ ಮಾಡಲಿದ್ದಾರೆ. ಗೇರು ಮತ್ತು ಕೋಕೋ ಅಭಿವೃದ್ದಿ ನಿರ್ದೇಶನಾಲಯ ಕೊಚ್ಚಿನ್ ಇದರ ಮಾಜಿ ನಿರ್ದೇಶಕ ಡಾ ವೆಂಕಟೇಶ್ ಎನ್. ಹುಬ್ಬಳ್ಳಿ ಅವರು ಭಾರತೀಯ ಗೋಡಂಬಿ ವಲಯ ಮತ್ತು ಕ್ಯಾಶ್ಯೂ ಟೆಕ್ನಾಲಜಿ ಕೇಂದ್ರ ಶಿವಮೊಗ್ಗ ಇದರ ಕೋ ಆರ್ಡಿನೇಟರ್ ಡಾ. ಸಿ. ಸುನಿಲ್ ಅವರು ಗೋಡಂಬಿ ಬೆಳೆಗೆ ಶಿವಮೊಗ್ಗ ಶಿವಮೊಗ್ಗ ವಿಶ್ವವಿದ್ಯಾಲಯದ ಕೊಡುಗೆಗಳು ಇದರ ಕುರಿತು ಮಾಹಿತಿ ನೀಡಲಿದ್ದಾರೆ. ಕೊಚ್ಚಿನ್ ಗೇರು ಮತ್ತು ಕೋಕೋ ಅಭಿವೃದ್ದಿ ನಿರ್ದೇಶನಾಲಯದ ಉಪನಿರ್ದೇಶಕ ದಾದಾ ಸಾಹೇಬ್ ದೇಸಾಯಿ ಅವರು ಗೋಡಂಬಿ ಬೆಳೆಯ ಬಗ್ಗೆ ಬಾರತ ಸರಕಾರದ ಉಪಕ್ರಮಗಳು, ಯೋಜನೆಗಳು, ನರ್ಸರಿಗಳ ಮಾನ್ಯತೆ ಬಗ್ಗೆ ಮಾಹಿತಿ ನೀಡುವರು ಎಂದು ಮಮತಾ ಗಟ್ಟಿ ಗೇರು ಮತ್ತು ಪರಿಸರ ಜಾಗೃತಿ ಸ್ಪರ್ಧೆಗಳು ಇದೇ ವೇಳೆ ನಡೆಯಲಿದ್ದು, ವಿದ್ಯಾರ್ಥಿಗೆ ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದರು.
ಗೇರು ಮೇಳದಲ್ಲಿ ನಿಗಮದ ವ್ಯಾಪ್ತಿಯಲ್ಲಿ ಗೇರು ಬೆಳೆಯ ಮೂಲಕ ಸಾಧನೆ ಮಾಡಿದ ಕೃಷಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದ ಮಮತಾ ಗಟ್ಟಿ ಗೇರು ಮೇಳದ ವಿಶೇಷ ಆಕರ್ಷಣೆಯಾಗಿ ಮೇ. 17 ರಂದು ಸಂಜೆ 7 ಗಂಟೆಗೆ ದೇವದಾಸ್ ಕಾಪಿಕಾಡ್ ತಂಡದವರಿಂದ ತುಳು ನಾಟಕ “ನಮಸ್ಕಾರ ಮಾಸ್ಟ್ರೇ” ನಾಟಕ ಪ್ರದರ್ಶನಗೊಳ್ಳಲಿದೆ ಹಾಗೂ ಮೇ 18 ರಂದು ಅಪರಾಹ್ನ 2 ಗಂಟೆಗೆ ಇಂಚರ ಮೆಲೋಡೀಸ್ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ರಾಜ್ಯ ಮಟ್ಟದ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ರೈತರಿಗೆ ಉಚಿತ ಕಣ್ಣಿನ ತಪಾಸಣೆ ಕೂಡಾ ಇದೇ ವೇಳೆ ನಡೆಯಲಿದೆ. ಸಾರ್ವಜನಿಕರು ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.
ಗೇರು ಉತ್ಪನ್ನಗಳ ಮೌಲ್ಯವರ್ಧನೆ ತಜ್ಞರಿಂದ ಮಾಹಿತಿ ಕಾರ್ಯಾಗಾರ, ಗೇರು ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ, ರೈತರ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಅವಕಾಶ. 70ಕ್ಕೂ ಹೆಚ್ಚು ಮಾರಾಟ ಮಳಿಗೆಗಳು (ಉಚಿತ ಪ್ರವೇಶ), ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿತ್ರಕಲಾ, ರಂಗೋಲಿ ಹಾಗೂ ಆನ್ ಲೈನ್ ಭಾಷಣ ಸ್ಪರ್ಧೆ, ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಗೇರು ಹಣ್ಣಿನ ಜ್ಯೂಸ್ (ಉಚಿತ), ಮನೆಗೊಂದು ಗೇರು ಕಾರ್ಯಕ್ರಮ, ಗೇರು ಕೃಷಿ ಸಾಧಕರಿಗೆ ಸನ್ಮಾನ, ಸಾರ್ವಜನಿಕರಿಗೆ ಉಚಿತ ಪ್ರವೇಶ ಇದು ಮೇಳದ ವೈಶಿಷ್ಟ್ಯಗಳು ಎಂದ ಮಮತಾ ಡಿ ಎಸ್ ಗಟ್ಟಿ, ಗೇರು ಕೃಷಿಯಲ್ಲಿ ಸಾಧನೆ ಮಾಡಿದ ಪ್ರಶಸ್ತಿ ವಿಜೇತ ರೈತರುಗಳಾದ ಕಡಮಜಲು ಸುಭಾಷ್ ರೈ, ವಿಶ್ವ ಕೇಶವ, ಶ್ರೀಕಾಂತ್ ಪೂಜಾರಿ, ಈಶ್ವರ್ ನಾಯ್ಕ್, ಅನಂತ ಸೀತಾರಾಮ್ ಭಂಡಾರಿ, ಅಪ್ಸಲಿ ಸುರತ್ಕಲ್, ಪ್ರಕಾಶ್ ಬಂಟ್ವಾಳ್, ಸುಜಾತ ರೈ, ಶ್ರೀಮತಿ ವಿಲ್ಮಾ ಉಳ್ಳಾಲ, ಪ್ರಜ್ಞಾ ಕುಮಾರ್ ಕಡಬ, ದಯಾನಂದ ಭಟ್, ವೆಲೇರಿಯನ್ ಡಿಸೋಜಾ ಬೆಳುವಾಯಿ ಹಾಗೂ ಕ್ಯಾನಟ್ ಅವರನ್ನು ಸನ್ಮಾನಿಸಲಾಗುವುದು ಎಂದರು.












0 comments:
Post a Comment