ಮಂಗಳೂರು, ಮೇ 23, 2026 (ಕರಾವಳಿ ಟೈಮ್ಸ್) : ನಗರದಲ್ಲಿ ಶೀಘ್ರದಲ್ಲೇ ಬೃಹತ್ ಉದ್ಯೋಗ ಮೇಳವನ್ನು ರಾಜ್ಯ ಸರಕಾರವು ಆಯೋಜಿಸಲಿದೆ ಎಂದು ಕೌಶಲ್ಯಾಭಿವೃದ್ದಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಜರ್ಮನ್ ಮಲ್ಟಿ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ (ಕೆಜಿಎಂಎಸ್‍ಡಿಸಿ) ಸೊಸೈಟಿ, ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆಜಿಟಿಟಿಐ) ಮಂಗಳೂರು ಇದರ ನೂತನ ಕಟ್ಟಡವನ್ನು ಮೇ 23 ರಂದು ಉದ್ಘಾಟಿಸಿ ಮಾತನಾಡಿದ ಅವರು, ಕರಾವಳಿ ಕರ್ನಾಟಕದ 3 ಜಿಲ್ಲೆಗಳ ಯುವಜನರನ್ನು ಕೇಂದ್ರೀಕರಿಸಿ ಈ ಉದ್ಯೋಗ ಮೇಳ ನಡೆಯಲಿದೆ. ಇದುವರೆಗೆ ರಾಜ್ಯದ ವಿವಿಧೆಡೆ ನಡೆದ ಉದ್ಯೋಗ ಮೇಳಗಳಿಂದ 30 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ದೊರಕಿದೆ ಎಂದರು.
ಕೌಶಲ್ಯ ಭರಿತ ವಿದ್ಯಾವಂತರನ್ನು ಸೃಷ್ಟಿಸಲು ರಾಜ್ಯದ 8 ಕಡೆ ಹೊಸದಾಗಿ ಕೆ ಜಿ ಟಿ ಟಿ ಐ ಕೇಂದ್ರಗಳನ್ನು ಮಂಜೂರುಗೊಳಿಸಲಾಗಿದೆ. ಇಲ್ಲಿ ರೆಫ್ರಿಜರೇಷನ್ ಮತ್ತು ಎಸಿ ತಾಂತ್ರಿಕತೆ ತರಬೇತಿಯ ಕೋರ್ಸುಗಳನ್ನು ಪ್ರಾರಂಭಿಸಲಾಗುವುದು. ಪ್ರಸ್ತುತ ಇಲ್ಲಿ 1 ದೀರ್ಘಾವದಿ ಮತ್ತು 31 ಅಲ್ಪಾವಧಿ ತರಬೇತಿ ನೀಡಲಾಗುತ್ತಿದೆ ಎಂದ ಸಚಿವರು, ಕೌಶಲ್ಯ ಶಿಕ್ಷಣ ಹೆಚ್ಚು ಮಂದಿಗೆ ದೊರಕಿಸುವ ನಿಟ್ಟಿನಲ್ಲಿ ಸರಕಾರಿ ಉಪಕರಣಗಾರ ಸಂಸ್ಥೆಗಳಲ್ಲಿ (ಜಿ ಟಿ ಟಿ ಸಿ) ಪ್ರವೇಶಾತಿ ಮಿತಿಯನ್ನು 2500 ರಿಂದ ಪ್ರವೇಶಾತಿ 6000ಕ್ಕೆ ಏರಿಸಲಾಗಿದೆ. ಇದಲ್ಲದೆ ರಾಜ್ಯದಲ್ಲಿ 20 ಹೊಸ ಜೆಟಿಟಿಸಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.
ಜಿಟಿಟಿಸಿ ಶಿಕ್ಷಣವು ಶೇಕಡಾ 100ರಷ್ಟು ಉದ್ಯೊಗಾವಕಾಶ ಇರುವ ತರಬೇತಿ ಆಗಿದ್ದು, ಮುಂದಿನ ದಿನಗಳಲ್ಲಿ ವಾರ್ಷಿಕ 10000 ಮಂದಿಗೆ ಜಿಟಿಟಿಸಿ ಅಡ್ಮಿಶನ್ ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಮಂಜುನಾಥ್ ಭಂಡಾರಿ, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ ಎಂ ಶಹೀದ್ ಮಾತನಾಡಿದರು. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ ಎ ಗಫೂರ್, ಉದ್ಯೋಗ ತರಬೇತಿ ಇಲಾಖೆ ಆಯುಕ್ತೆ ಶಿಲ್ಪಾ, ಮಾಜಿ ಕಾಪೆರ್Çರೇಟರ್ ಶಕೀಲಾ ಕಾವ, ಕೆಜಿಟಿಟಿಐ ಜಂಟಿ ಕಾರ್ಯದರ್ಶಿ ವಿ ಎಸ್ ರಘುಪತಿ ಮೊದಲಾದವರು ಭಾಗವಹಿಸಿದ್ದರು.














0 comments:
Post a Comment