6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಆರೋಪಿ ಸುರತ್ಕಲ್ ಪೊಲೀಸರ ಬಲೆಗೆ - Karavali Times 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಆರೋಪಿ ಸುರತ್ಕಲ್ ಪೊಲೀಸರ ಬಲೆಗೆ - Karavali Times

728x90

4 May 2026

6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಆರೋಪಿ ಸುರತ್ಕಲ್ ಪೊಲೀಸರ ಬಲೆಗೆ

ಮಂಗಳೂರು, ಮೇ 05, 2026 (ಕರಾವಳಿ ಟೈಮ್ಸ್) : 2014 ರಲ್ಲಿ ಮಹಿಳೆಯ ಕುತ್ತಿಗೆ ಕೊಯ್ದು ಕೊಲೆಗೈದು ಬಂಗಾರದ ಒಡವೆಗಳನ್ನು ದೋಚಲಾಗಿದ್ದ ಪ್ರಕರಣದಲ್ಲಿ ಕಳೆದ 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ಬಹದ್ದೂರ್ ಸಿಂಗ್ @ ಬಹದ್ದೂರ್ ಅಲಿಯಾಸ್ ಬುಯ್ಯಾ ಎಂದು ಹೆಸರಿಸಲಾಗಿದೆ. 2014 ರ ಆಗಸ್ಟ್ 8 ರಂದು ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆ ಮದ್ಯೆ ಕುಳಾಯಿ ಹೊಸಬೆಟ್ಟುವಿನ ಕೋರ್ದಬ್ಬು ‘ಕಲ’ದ ಬಳಿಯ ನಿವಾಸಿ ಶ್ರೀಮತಿ ಸುಮತಿ ಪ್ರಭು ಎಂಬವರನ್ನು ಕುತ್ತಿಗೆಗೆ ಚೂರಿಯಿದ ಕೊಯ್ದು ಕೊಲೆ ಮಾಡಿ ಮೈಮೇಲಿದ್ದ ಸುಮಾರು 3.80 ಲಕ್ಷ ರೂಪಾಯಿ ಮೌಲ್ಯದ 192 ಗ್ರಾಂ (24 ಪವನ್) ತೂಕದ ಬಂಗಾರದ ಒಡವೆಗಳನ್ನು ದೋಚಿಕೊಂಡು ಹೋದ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿಗಳಾದ ರಾಜಸ್ಥಾನ ಮೂಲದ ಶಿವರಾಮ್, ಉತ್ತರ ಪ್ರದೇಶ ಮೂಲದ ಬಹುದ್ದೂರ್ ಸಿಂಗ್ ಅಲಿಯಾಸ್ ಬಹುದ್ದುರ ಅಲಿಯಾಸ್ ಬುಯ್ಯ ಹಾಗೂ ಶಹನ್ವಾಜ್ ಅಲಿಯಾಸ್ ಶಾನು ಎಂಬವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆರೋಪಿತರ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿದಂತೆ  2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿರುತ್ತದೆ. 

ಪ್ರಕರಣದ ಆರೋಪಿ ಬಹದ್ದೂರ್ ಸಿಂಗ್ ಕಳೆದ 6 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿರುತ್ತಾನೆ. ನ್ಯಾಯಾಲಯ ಈತನ ಮೇಲೆ ದಸ್ತಗಿರಿ ವಾರಂಟ್ ಹೊರಡಿಸಿತ್ತು. ಆರೋಪಿಯು ರಾಜಸ್ಥಾನ ರಾಜ್ಯದ ವಿಳಾಸದಲ್ಲಿ ವಾಸವಿರದೇ ಇದ್ದು ದಸ್ತಗಿರಿ ಮಾಡಲು ಅನಾನುಕೂಲವಾದ್ದರಿಂದ ಈತನ ಮೇಲೆ ನ್ಯಾಯಾಲಯವು ಉದ್ಘೋಷಣೆ ಹೊರಡಿಸಿರುತ್ತದೆ. ಈ ಬಗ್ಗೆ ಆರೋಪಿತನನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಠಾಣಾ ಸಿಬ್ಬಂದಿಗಳಾದ ಅಜಿತ್ ಮ್ಯಾಥ್ಯು, ಸುನಿಲ್ ಕುಸನಾಳ, ಮೋಹನ್ ಎಂಬವರನ್ನು ವಿಶೇಷ ಕರ್ತವ್ಯದಲ್ಲಿ ನೇಮಿಸಲಾಗಿದ್ದು, ಇವರು ಆರೋಪಿ ಬಗ್ಗೆ ಮಾಹಿತಿ ಪಡೆದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗುರುಮಾರನಹಳ್ಳಿಯಲ್ಲಿ ಮೇ 3 ರಂದು ಮಧ್ಯಾಹ್ನ 1 ಗಂಟೆಗೆ ದಸ್ತಗಿರಿ ಮಾಡಿರುತ್ತಾರೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಆರೋಪಿ ಸುರತ್ಕಲ್ ಪೊಲೀಸರ ಬಲೆಗೆ Rating: 5 Reviewed By: karavali Times
Scroll to Top