ಬಂಟ್ವಾಳ, ಮೇ 16, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು-ಆಲಡ್ಕದ ಎಸ್ ಎಸ್ ಆಡಿಟೋರಿಯಂನಲ್ಲಿ ಮೇ 12 ರಂದು ನಡೆದ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಬಗ್ಗೆ ಮಾಜಿ ಸಚಿವ ಬಿ ರಮಾನಾಥ ರೈ ಮೆಚ್ಚುಗೆ ವ್ಯಕ್ತಪಡಿಸಿ ಸಂಘಟಕರ ಶ್ರಮವನ್ನು ಕೊಂಡಾಡಿದರು.
ಸಮ್ಮೇಳನದ ಸಮಾರೋಪ ಸಮಾರಂಭಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು, ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ ಬಹಳ ಅಚ್ಚುಕಟ್ಟಾಗಿ ನಡೆದಿರುವುದು ಸಭಾಂಗಣ ನೋಡುವಾಗಲೇ ತಿಳಿಯುತ್ತದೆ. ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನದಲ್ಲಿ ಬೆಳಗ್ಗಿನ ಕಾರ್ಯಕ್ರಮಕ್ಕೆ ಒಂದಷ್ಟು ಜನ ಇದ್ದರೆ, ಸಂಜೆಯಾಗುತ್ತಲೇ ಸಭಾಂಗಣ ಖಾಲಿಯಾಗುತ್ತದೆ. ಆದರೆ ಇಲ್ಲಿನ ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ ಇಳಿ ಸಂಜೆವರೆಗೂ ಸಭಾಂಗಣ ತುಂಬಿಕೊಂಡಿದೆ. ಅದರಲ್ಲೂ ಬಹುಸಂಖ್ಯೆಯಲ್ಲಿ ಮಹಿಳೆಯರೂ ಪಾಲ್ಗೊಂಡಿರುವುದು ಬಂಟ್ವಾಳದ ಬ್ಯಾರಿ ಸಮುದಾಯದ ಮಂದಿಗೆ ಸಾಹಿತ್ಯ ಬಗ್ಗೆ ಇರುವ ಆಸಕ್ತಿಯನ್ನು ಎತ್ತಿ ತೋರಿಸುತ್ತದೆ ಎಂದರು.
ಬ್ಯಾರಿ ಸಾಹಿತ್ಯ ಸಮ್ಮೇಳನದ ಹಿಂದೆ ಸಂಘಟಕರ ಶ್ರಮ ಎದ್ದು ಕಂಡುಬರುತ್ತದೆ. ಇಂತಹ ಸಾಹಿತ್ಯಕ ಕಾರ್ಯಕ್ರಮಗಳು ತಾಲೂಕಿನಲ್ಲಿ ನಿರಂತರ ನಡೆಯುತ್ತಿರಲಿ. ಆ ಮೂಲಕ ಸಮಾಜದಲ್ಲಿ ಸಾಮರಸ್ಯ, ಶಾಂತಿ-ನೆಮ್ಮದಿ ನೆಲೆಗೊಳ್ಳಲಿ ಎಂದು ಆಶಿಸಿದರು.










0 comments:
Post a Comment