ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ ಸಮರೋಪ ಭಾಷಣದಲ್ಲಿ ಬಂಟ್ವಾಳದ ಹಿರಿಮೆ ಬಗ್ಗೆ ಮೆಚ್ಚುಗೆ
ಬಂಟ್ವಾಳ, ಮೇ 14, 2026 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಬ್ಯಾರಿ ಭಾಷೆ, ಸಾಹಿತ್ಯ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ತಾಲೂಕು ಎಂಬುದು ಇವತ್ತು ಕೂಡಾ ಸಾಬೀತಾಗಿದೆ ಎಂದು ಪುತ್ತೂರು ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಹೇಳಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಸಹಯೋಗದಲ್ಲಿ ಪಾಣೆಮಂಗಳೂರಿನ ಆಲಡ್ಕದ ಎಸ್ ಎಸ್ ಆಡಿಟೋರಿಯಂ ಇಲ್ಲಿನ ಮರ್ ಹೂಂ ಫಾರೂಕ್ ಗೂಡಿನಬಳಿ ದ್ವಾರ, ಮರ್ ಹೂಂ ಮಹಮ್ಮದ್ ಮಾರಿಪಳ್ಳ ಸಭಾಂಗಣ, ಮರ್ ಹೂಂ ಹಾಜಿ ಜಿ ಅಬ್ದುಲ್ ಖಾದರ್ ವೇದಿಕೆಯಲ್ಲಿ ಮೇ 12 ರಂದು ನಡೆದ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ನೂರು ವರ್ಷಗಳ ಮೊದಲೇ ಬಂಟ್ವಾಳ ತಾಲೂಕಿನ ಗೂಡಿನಬಳಿಯಲ್ಲಿ ಹಯಾತುಲ್ ಇಸ್ಲಾಂ, ಅಕ್ಕರಂಗಡಿ ದಾರುಲ್ ಇಸ್ಲಾಂ, ಬಂಟ್ವಾಳ-ಕೆಳಗಿನಪೇಟೆಯ ಮನಾರುಲ್ ಇಸ್ಲಾಂ ಶಾಲೆಗಳು ಆರಂಭಗೊಂಡಿರುವುದು ಬಂಟ್ವಾಳದ ಬ್ಯಾರಿ ಸಮುದಾಯ ಶಿಕ್ಷಣಕ್ಕಾಗಿ ಕೆಲಸ ಮಾಡಿದೆ ಎಂಬುದಕ್ಕೆ ಸಾಕ್ಷಿಯಾದರೆ, ಸ್ವಾತಂತ್ರ್ಯ ಪೂರ್ವದಲ್ಲಿ ವೀರಕಂಭ ಗ್ರಾಮದ ಪಾತ್ರತೋಟ ನಿವಾಸಿ ರಮ್ಲಾನ್ ಹಾಜಿ ಎಂಬವರು ಮಂಗಳೂರಿನಲ್ಲಿ ಡೀಸಿಯಾಗಿದ್ದರು. ಅಮ್ಮುಂಜೆ ಗ್ರಾಮದ ಜಿ ಎ ಬಾವಾ ಅವರು ಬೆಂಜನಪದವು ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಬೆಂಗಳೂರಿನಲ್ಲಿ ಎಸಿಪಿಯಾಗಿ ನಿವೃತ್ತರಾಗಿದ್ದಾರೆ. ಕಂಬಳಬೆಟ್ಟು ಎಂಬ ಗ್ರಾಮೀಣ ಪ್ರದೇಶದ ಯುವಕ ಡಾ ಅಬ್ದುಲ್ ಬಶೀರ್ ವಿ ಕೆ ಅವರು ಎಂಬಿಬಿಎಸ್ ವೈದ್ಯಕೀಯ ಪದವಿ ಪಡೆದು ಹಾಸನ ಜಿಲ್ಲೆಯಲ್ಲಿ ಆಸ್ಪತ್ರೆ ನಿರ್ಮಿಸಿದ್ದಾರೆ. ಬೋಳಂತೂರಿನ ಯುವಕ ಡಾ ಬಿ ಎಂ ಬೀರಾನ್ ಮೊಯಿದಿನ್ ಅವರು ಪೂನಾದಲ್ಲಿ ವಿಶ್ವವಿದ್ಯಾನಿಯಲದ ರಿಜಿಸ್ಟ್ರಾರ್ ಆಗಿ ಶೈಕ್ಷಣಿಕ ಸಾಧನೆ ಮಾಡಿ ಇಂದು ನಮ್ಮ ಸಮ್ಮೇಳನದಲ್ಲಿ ಅತಿಥಿಯಾಗಿದ್ದಾರೆ. ಇದೆಲ್ಲವೂ ತಾಲೂಕಿನ ಬ್ಯಾರಿಗಳ ಉಚ್ಛ್ರಾಯ ಸ್ಥಿತಿಗೆ, ಶೈಕ್ಷಣಿಕ ಬದಲಾವಣೆಗೆ ಸಾಕ್ಷಿ.
ಆದರೆ ಉಪನ್ಯಾಸಕನಾಗಿರುವ ನನ್ನ ಸಹಿತ ಈ ಯಾವುದೇ ಶೈಕ್ಷಣಿಕ ಸಾಧಕರಿಂದ ಭಾಷೆಯನ್ನು ಉಳಿಸಲು ಸಾಧ್ಯವಿಲ್ಲ. ಭಾಷೆಯನ್ನು ಬೆಳೆಸಬಹುದಷ್ಟೆ. ಆದರೆ ಭಾಷೆಯನ್ನು ಉಳಿಸಲು ಶಾಲೆಯನ್ನು ಸಾಲೆ, ಸ್ಕೂಲ್ ನ್ನು ಇಸ್ಕೂಲ್, ಇಂಜಕ್ಷನ್ ನ್ನು ತೂಸಿ, ಡಾಕ್ಟರ್ ನ್ನು ದಾಕ್ ದಾರ್ ಎಂಬ ಪದಗಳ ಬಳಕೆಯ ಮೂಲಕ ರಸ್ತೆ ಬದಿ ತಾಳೆ ಹಣ್ಣು ಮಾರುವ, ಎಳನೀರು ಮಾರುವ, ಹೊಟ್ಟೆಪಾಡಿಗಾಗಿ ಗುಜರಿ ವ್ಯಾಪಾರ ಮಾಡುವ, ಗೂಡಂಗಡಿ ವ್ಯಾಪಾರಿ, ಕೂಲಿ ಕಾರ್ಮಿಕ, ಮೀನು ಮಾರಾಟ ಮಾಡುವಂತಹ ಜನ ಸಾಮಾನ್ಯರೇ ದೈನಂದಿನ ಬ್ಯಾರಿ ಪದಗಳ ಬಳಕೆಯ ಮೂಲಕ ಭಾಷೆಯನ್ನು ಉಳಿಸಬಲ್ಲರು ಎಂದರು.
ಅಲ್ಲದೆ ಈ ಹಿಂದೆ ನಡೆದ ಚಿಕ್ಕಮಗಳೂರು ಬ್ಯಾರಿ ಸಮ್ಮೇಳನ ಹಾಗೂ ಉಡುಪಿ ಸಾಹಿತ್ಯ ಸಮ್ಮೇಳನದಲ್ಲೂ ಕೂಡಾ ಬಹುಪಾಲು ಮಂದಿ ಭಾಗವಹಿಸಿದ್ದು ಬಂಟ್ವಾಳದವರು. ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಒಟ್ಟು ಬ್ಯಾರಿಗಳ ಪೈಕಿ ಬಂಟ್ವಾಳದ ಬ್ಯಾರಿಗಳ ಸಂಖ್ಯೆ ಐವತ್ತು ಶೇಕಡಾದಷ್ಟಿರುತ್ತದೆ. ಅದಕ್ಕಾಗಿ ಬ್ಯಾರಿಗಳೆಂದರೆ ಬಂಟ್ವಾಳ, ಬಂಟ್ವಾಳ ಎಂದರೆ ಬ್ಯಾರಿಗಳು ಎಂಬ ಪದ ಬಳಕೆ ಇದೆ. ಇದೀಗ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ನಡೆಸುತ್ತಿರುವ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳ ಪೈಕಿ ಅತ್ಯಂತ ಯಶಸ್ವಿ ಹಾಗೂ ಅಚ್ಚುಕಟ್ಟಿನ ಸಮ್ಮೇಳನ ನಡೆದಿರುವುದು ಇಂದಿನ ಬಂಟ್ವಾಳ ಸಮ್ಮೇಳನ ಎಂಬುದು ಇಂದಿಗೂ ಬಂಟ್ವಾಳದ ಬ್ಯಾರಿಗಳ ಸಾಹಿತ್ಯಿಕ ಆಸಕ್ತಿಯನ್ನು ಎತ್ತಿ ಹಿಡಿದಿದೆ. ಬಂಟ್ವಾಳ ಸಮ್ಮೇಳನದ ಆರಂಭದಿಂದ ಅಂತ್ಯದವರೆಗೂ ಸಾಹಿತ್ಯಾಭಿಮಾನಿಗಳು, ಭಾಷಾ ಪ್ರಿಯರು ಇಡೀ ದಿನ ಭಾಗವಹಿಸಿರುವುದೇ ಬಂಟ್ವಾಳದ ಬ್ಯಾರಿಗಳ ಸಾಹಿತ್ಯಿಕ ಪ್ರೀತಿಗೆ ಸಾಕ್ಷಿ. ಇದನ್ನು ಅಕಾಡೆಮಿ ಅಧ್ಯಕ್ಷರು ಮನಗಾಣಬೇಕು ಎಂದು ಸೂಚಿಸಿದರು.










0 comments:
Post a Comment