ಬಂಟ್ವಾಳ, ಮೇ 16, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು-ಆಲಡ್ಕದ ಎಸ್ ಎಸ್ ಆಡಿಟೋರಿಯಂನಲ್ಲಿ ಮೇ 12 ರಂದು ನಡೆದ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ ಸತ್ತಾರ್ ಗೂಡಿನಬಳಿ ಅವರು ರಚಿಸಿ ನಿರ್ದೇಶಿಸಿರುವ “ತೆರು ತಪ್ಪಿರ್” ಬ್ಯಾರಿ ಪ್ರಹಸನವು ಸೇರಿದ್ದ ಜನರ ಮನಸೂರೆಗೊಂಡಿತು. ತುಂಬಿದ್ದ ಸಭಾಂಗಣದಲ್ಲಿದ್ದ ಜನ ಪ್ರಹಸನದ ಕೊನೆವರೆಗೂ ಕುಳಿತಲ್ಲಿಂದ ಕದಲದೆ, ನಿಂತಲ್ಲಿಂದ ಅಲುಗಾಡದೆ ಪ್ರಹಸನ ವೀಕ್ಷಿಸಿ ಅತೀವ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಸ್ತುತ ಸಮಾಜದಲ್ಲಿ ತೀವ್ರ ಕೋಲಾಹಲ ಉಂಟುಮಾಡಿರುವ ಡ್ರಗ್ಸ್ ಮಾರಿಯ ವಿರುದ್ದ ಜಾಗೃತಿ ಸಂದೇಶವನ್ನೊಳಗೊಂಡ ಪ್ರಹಸನ ಸಮಾಜದಲ್ಲಿ ಪರಿವರ್ತನೆಗೆ ಹೇತುವಾದೀತು ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಸಮಾಜಮುಖಿ ಸಂದೇಶ ಇರುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಪ್ರದರ್ಶನಗೊಂಡು ಸಮಾಜ ಪರಿವರ್ತನೆಗೆ ಸಂಘಟಕರು ಅವಕಾಶ ಮಾಡಿಕೊಡುವಂತೆ ಆಗ್ರಹಿಸಿದರು.
ಸಮ್ಮೇಳನದಲ್ಲಿ ರಶೀದ್ ನಂದಾವರ ಹಾಗೂ ಅಶ್ರಫ್ ಅಪೋಲೋ ಕಲ್ಲಡ್ಕ ಅವರ ನೇತೃತ್ವದಲ್ಲಿ ಬ್ಯಾರಿ ಹಾಡುಗಾರಿಕೆ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳ ದಫ್ ಪ್ರದರ್ಶನ ಕೂಡಾ ಜನರ ಮನಸ್ಸನ್ನು ಮುದಗೊಳಿಸಿತು. ಸಮ್ಮೇಳನದ ಪ್ರತಿಯೊಂದು ಕಾರ್ಯಕ್ರಮಗಳು ಭಿನ್ನವಾಗಿ ವೈವಿಧ್ಯಮಯವಾಗಿ ಸಾಗಿ ಬಂದಿದ್ದು, ಒಟ್ಟಾರೆ ಸಮ್ಮೇಳನದ ಯಶಸ್ವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.










0 comments:
Post a Comment