ಮಂಗಳೂರು, ಮೇ 30, 2026 (ಕರಾವಳಿ ಟೈಮ್ಸ್) : ರಸ್ತೆ ಅಪಘಾತಗಳನ್ನು ತಡೆಗಟ್ಟುವ ಹಾಗೂ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಪೆÇಲೀಸ್ ಇಲಾಖೆಯ ವತಿಯಿಂದ ಕಳೆದ ಒಂದು ವಾರದ ಅವಧಿಯಲ್ಲಿ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವವರು ಮತ್ತು ರಾಂಗ್ ಸೈಡ್ ವಾಹನ ಚಲಾಯಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದ ಅಪಘಾತಗಳಲ್ಲಿ ತಲೆಗೆ ಗಂಭೀರ ಗಾಯಗಳಾಗಿ ಸಾವನ್ನಪ್ಪುವ ಹಾಗೂ ಗಂಭೀರವಾಗಿ ಗಾಯಗೊಳ್ಳುವ ಪ್ರಕರಣಗಳು ಹೆಚ್ಚುತ್ತಿರುವುದಾಗಿದೆ. ಇದೇ ರೀತಿಯಾಗಿ, ಸಮಯ ಉಳಿಸುವ ಉದ್ದೇಶದಿಂದ ಅಥವಾ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ರಾಂಗ್ ಸೈಡ್ ವಾಹನ ಚಲಾಯಿಸುವುದರಿಂದ ಮುಖಾಮುಖಿ ಡಿಕ್ಕಿ, ಪಾದಚಾರಿಗಳಿಗೆ ಅಪಾಯ ಹಾಗೂ ಇತರೆ ವಾಹನಗಳಿಗೆ ತೊಂದರೆಯಾಗುವ ಘಟನೆಗಳು ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ ಹಾಗೂ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಚರಣೆಯ ವೇಳೆ ನಗರದ ಪ್ರಮುಖ ಜಂಕ್ಷನ್‍ಗಳು, ಎನ್.ಎಚ್-66 ಮತ್ತು 169 ಹೆದ್ದಾರಿಗಳಲ್ಲಿ, ನಗರದ ಹೊರವಲಯಗಳಲ್ಲಿ ಹಾಗೂ ಅಪಘಾತ ಹೆಚ್ಚಾಗಿ ಸಂಭವಿಸುವ ಸ್ಥಳಗಳಲ್ಲಿ ವಿಶೇಷ ತಪಾಸಣೆ ನಡೆಸಿ ಪ್ರಕರಣ ದಾಖಲಿಸಲಾಯಿತು.
ಕಾರ್ಯಾಚರಣೆಯ ಸಂದರ್ಭ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದವರ ವಿರುದ್ಧ 1050 ಪ್ರಕರಣಗಳನ್ನು ದಾಖಲಿಸಿದ್ದು, ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಒಟ್ಟು 4,63,500/- ರೂಪಾಯಿ ದಂಡ ವಿಧಿಸಲಾಗಿದೆ. ಅದೇ ರೀತಿ ರಾಂಗ್ ಸೈಡ್ ವಾಹನ ಚಲಾಯಿಸಿದ 322 ಪ್ರಕರಣಗಳು ಪತ್ತೆಯಾಗಿದ್ದು, ಸದರಿ ವಾಹನ ಸವಾರರಿಗೆ ಒಟ್ಟು 1,61,000/- ರೂಪಾಯಿ ದಂಡ ವಿಧಿಸಲಾಗಿದೆ. ಈ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 1372 ದ್ವಿ-ಚಕ್ರ ವಾಹನಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಅಲ್ಲದೇ ರಾಷ್ಟೀಯ ಹೆದ್ದಾರಿ-169 (ಬಿಕರ್ನಕಟ್ಟೆ-ಮೂಡಬಿದ್ರೆ-ಬೆಳುವಾಯಿ ರಸ್ತೆ) ಯಲ್ಲಿ ನಡೆಯುವ ರಸ್ತೆ ಅಪಘಾತ ಪ್ರಕರಣಗಳಲ್ಲಿ ಶೀಘ್ರವಾಗಿ ಸ್ಪಂದಿಸಲು, ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲು ಹಾಗೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಂಗಳೂರು ನಗರ ಪೆÇಲೀಸ್ ಕಮಿಷನರೇಟ್ ವ್ಯಾಪ್ತಿಯ ಎನ್.ಎಚ್-169 ಹೆದ್ದಾರಿಯ ಬೈತುರ್ಲಿಯಿಂದ ಮೀಜಾರ್ ವರೆಗೆ ಹೆಚ್ಚುವರಿಯಾಗಿ ಹೈವೇ ಪೆಟ್ರೋಲ್ ವಾಹನವನ್ನು ನಿಯೋಜಿಸಲಾಗಿದೆ. (ಸುಮಾರು 20 ಕೀ.ಮೀ) ಮೂಡಬಿದ್ರೆ ಠಾಣಾ ಸರಹದ್ದಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗಾಗಲೇ ಒಂದು ಹೈವೇ ಪ್ರಟ್ರೋಲ್ ವಾಹನವು ಕಾರ್ಯಾಚರಣೆ ನಡೆಸುತ್ತಿದೆ. ಈ ವಾಹನಗಳು ನಿಗದಿಪಡಿಸಿದ ಕಾರ್ಯವ್ಯಾಪ್ತಿಯೊಳಗೆ 24*7 ಕಾಲ ಕರ್ತವ್ಯದಲ್ಲಿರುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಪ್ರಕಟಣೆ ತಿಳಿಸಿದೆ.






















0 comments:
Post a Comment