ಬಂಟ್ವಾಳ, ಮೇ 10, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡು-ಪೊಳಲಿ ರಸ್ತೆಯ ಧನುಪೂಜೆ ಎಂಬಲ್ಲಿ ಚರ್ಚ್ ಬಳಿ ರಸ್ತೆಗೆ ತಾಗಿಕೊಂಡಂತೆ ಗುಡ್ಡದಲ್ಲಿ ಬೃಹತ್ ಬಂಡೆಯೊಂದು ಕಂಡು ಬರುತ್ತಿದ್ದು, ಇದು ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನ ಸವಾರರಿಗೆ ಅಪಾಯದ ಕರೆಗಂಟೆ ಭಾರಿಸುತ್ತಿದೆ.
ಇಲ್ಲಿನ ರಸ್ತೆ ಇರುವ ಸ್ಥಳ ತೀರಾ ತಿರುವು ಪ್ರದೇಶವಾಗಿದ್ದು, ರಸ್ತೆ ಬದಿಯ ಗುಡ್ಡದಲ್ಲಿ ಬಂಡೆ ಕಲ್ಲು ಇರುವುದರಿಂದ ತಿರುವು ಪ್ರದೇಶದ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಒಂದು ಬದಿಯಿಂದ ಇನ್ನೊಂದು ಬದಿ ಕಾಣದ ಸ್ಥಿತಿಯಲ್ಲಿದ್ದು, ವಾಹನ ಸವಾರರು ಒಂದಷ್ಟು ಯಾಮಾರಿದರೂ ಗಂಭೀರ ಅಪಾಯಗಳು ಸಂಭವಿಸುವ ಸಾಧ್ಯತೆ ಇದೆ. ಇದರಿಂದಾಗಿ ರಸ್ತೆ ಬದಿಯ ತಿರುವಿನಲ್ಲಿ ರಸ್ತೆಗೆ ಬಂದಂತಿರುವ ಬೃಹತ್ ಆಕಾರದ ಬಂಡೆ ಕಲ್ಲನ್ನು ತೆರವುಗೊಳಿಸಿ ವಾಹನ ಸವಾರರ ಪಾಲಿಗೆ ಅಪಾಯದಂತಿರುವ ಪರಿಸ್ಥಿತಿಯನ್ನು ಸಮಪರ್ಕಗೊಳಿಸುವಂತೆ ವಾಹನ ಸವಾರರು ಆಗ್ರಹಿಸಿದ್ದಾರೆ.
ಅಲ್ಲದೆ ಈ ರಸ್ತೆಯುದ್ದಕ್ಕೂ ತಿರುವು-ಮುರುವು ಜಾಸ್ತಿ ಪ್ರಮಾಣದಲ್ಲಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನ ಹರಿಸಬೇಕಾಗಿದೆ. ಹಿಂದಿನ ಕಾಲದಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರ ತೀರಾ ವಿರಳ ಪ್ರಮಾಣದಲ್ಲಿದ್ದು, ಯಾವುದೇ ಸಮಸ್ಯೆಗಳಿರಲಿಲ್ಲ. ಆದರೆ ಇದೀಗ ವಾಹನಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿದ್ದು, ನಿತ್ಯವೂ ವಾಹನ ನಿಬಿಡತೆ ಕಂಡು ಬರುತ್ತಿದೆ. ನಿರಂತರ ವಾಹನಗಳು ಎದುರು ಬದುರು ಬರುತ್ತಿರುವ ಕಾರಣ ಅಪಾಯಗಳೂ ಜಾಸ್ತಿಯಾಗುವ ಸಾಧ್ಯತೆ ಇರುವುದರಿಂದ ಈ ಪ್ರದೇಶದಲ್ಲಿ ಹಾದು ಹೋಗುವ ರಸ್ತೆಗಳನ್ನು ಅಗಲೀಕರಣಗೊಳಿಸಿ ತಿರುವುಗಳನ್ನು ತೆರವುಗೊಳಿಸುವ ಮೂಲಕ ಅಪಾಯವನ್ನು ತಡೆಗಟ್ಟಬೇಕು ಎಂಬ ಆಗ್ರಹ ಸ್ಥಳೀಯರಿಂದ ಕೇಳಿ ಬರುತ್ತಿದೆ.














0 comments:
Post a Comment