ಮಂಗಳೂರು, ಮೇ 16, 2026 (ಕರಾವಳಿ ಟೈಮ್ಸ್) : ಪರವಾನಿಗೆ ರಹಿತವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣ ಬೇಧಿಸಿದ ಕಂಕನಾಡಿ ಪೊಲೀಸರು 27 ಕೋಣಗಳ ಸಹಿತ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ ಘಟನೆ ಜಪ್ಪಿನಮೊಗರು ಇಂಡಿಯಾನಾ ಹಾಲ್ ಎದುರು ಮೇ 16 ರಂದು ಮುಂಜಾನೆ ನಡೆದಿದೆ.
ಕರ್ನಾಟಕ ರಾಜ್ಯದ ಹಾವೇರಿಯಿಂದ ಕೇರಳ ರಾಜ್ಯದ ತಲಿಪರಂಬು ಎಂಬಲ್ಲಿಗೆ ಯಾವುದೇ ದಾಖಲಾತಿ ಇಲ್ಲದೆ ಜಾನುವಾರುಗಳನ್ನು ಈಚರ್ ಲಾರಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಕಂಕನಾಡಿ ನಗರ ಠಾಣಾ ಪೊಲೀಸರು 27 ಕೋಣಗಳನ್ನು ರಕ್ಷಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯ ಬೊಮ್ಮನಕಟ್ಟೆ ಅಶ್ರಯ ಬಡಾವಣೆ ನಿವಾಸಿ ರಾಜೇಸಾಬ ಅವರ ಪುತ್ರ ಸಯ್ಯದ್ ಮೆಹಬೂಬ್ ಅಲಿ (28), ಹಾವೇರಿ ಜಿಲ್ಲೆಯ ಹಿರೇಕೆರೂರ್ ತಾಲೂಕಿನ ಮಾಡ್ಲುರ್ ಅಂಚೆ ವ್ಯಾಪ್ತಿಯ ನಿಟ್ಟೂರು ಅಡವಿ ನಿವಾಸಿಗಳಾದ ಚಂದ್ರಪ್ಪ ಅವರ ಪುತ್ರ ಅರುಣ ಚಂದ್ರಪ್ಪ ಜಾವಳಿ (32) ಹಾಗೂ ಲಕ್ಷ್ಮಪ್ಪ ಅವರ ಪುತ್ರ ಸುನೀಲ್ ಲಕ್ಷ್ಮಪ್ಪ ಜಾವಳ್ಳಿ (24), ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಮಾದೇವರಳ್ಳಿ ಗ್ರಾಮದ ನಿವಾಸಿ ರಂಗಸ್ವಾಮಿ ಅವರ ಪುತ್ರ ಹಿರಿಯಣ್ಣ ಗೌಡ (46) ಎಂದು ಹೆಸರಿಸಲಾಗಿದೆ.
ಆರೋಪಿಗಳ ಸಹಿತ ಜಾನುವಾರುಗಳು ಹಾಗೂ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಈ ಬಗ್ಗೆ ಕಂಕನಾಡಿ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋಣಗಳನ್ನು ನ್ಯಾಯಾಲಯದ ಆದೇಶದಂತೆ ಗೋ ಶಾಲೆಯ ವಶಕ್ಕೆ ನೀಡಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.











0 comments:
Post a Comment