ಮೂಡಬಿದ್ರೆ, ಮೇ 16, 2026 (ಕರಾವಳಿ ಟೈಮ್ಸ್) : ಕಾರಿನಲ್ಲಿ ಜಾನುವಾರು ಅಕ್ರಮ ಹಾಗೂ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣ ಬೇಧಿಸಿದ ಮೂಡಬಿದ್ರೆ ಪೊಲೀಸರು ಇಬ್ಬರನ್ನು ಬಂಧಿಸಿದ ಘಟನೆ ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ಕ್ರಾಸ್ ಬಳಿ ಮೇ 14 ರಂದು ಬೆಳಿಗ್ಗೆ ನಡೆದಿದೆ.
ಬಂಧಿತ ಆರೋಪಿಗಳನ್ನು ಹಂಡೇಲು ನಿವಾಸಿ ಮುಹಮ್ಮದ್ ಆರಿಫ್ ಹಾಗೂ ಆತನ ಸಹಚರ ಗಂಟಾಲ್ಕಟ್ಟೆಯ ಇಮ್ರಾನ್ ಅಲಿಯಾಸ್ ಇಬ್ರಾಹಿಂ ಎಂದು ಹೆಸರಿಸಲಾಗಿದೆ. ಮೇ 14 ರಂದು ಮೂಡಬಿದ್ರೆ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳುವಾಯಿ ಕಡೆಯಿಂದ ಮಾರ್ನಾಡು ಅಳಿಯೂರು ಕಡೆಗೆ ಮಾರುತಿ ಬ್ರೀಜಾ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡಲಾಗುತ್ತಿದೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸರು ಮೂಡಬಿದ್ರೆ ತಾಲೂಕು ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ಕ್ರಾಸ್ ಬಳಿ ವಾಹನ ತಪಾಸಣೆ ಮಾಡುತ್ತಿರುವ ವೇಳೆ ಬೆಳಿಗ್ಗೆ ಸುಮಾರು 7.30 ಗಂಟೆಗೆ ಬೆಳುವಾಯಿ ಕಡೆಯಿಂದ ಕೆಎ19 ಎಂಕೆ4265 ನೋಂದಣಿ ಸಂಖ್ಯೆಯ ಬೂದು ಬಣ್ಣದ ಮಾರುತಿ ಬ್ರೀಜಾ ಕಾರು ಬಂದಿದ್ದು, ಪೊಲೀಸರು ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೇ ಮುಂದಕ್ಕೆ ಚಲಾಯಿಸಿಕೊಂಡು ಹೋಗಿರುತ್ತಾರೆ. ನಂತರ ಸದ್ರಿ ವಾಹನವನ್ನು ಬೆನ್ನಟ್ಟಿದಾಗ ಸ್ವಲ್ಪ ಮುಂದಕ್ಕೆ ಗುಂಡುಕಲ್ಲು 5 ಸೈಂಟ್ಸ್ ರಸ್ತೆಗೆ ತಿರುಗಿ ಸಾಹುಲ್ ಹಮೀದ್ ಎಂಬವರ ಮನೆ ಕಂಪೌಂಡ್ ಒಳಭಾಗದಲ್ಲಿ ಬ್ರೀಜಾ ಕಾರನ್ನು ನಿಲ್ಲಿಸಿ ವಾಹನದಲ್ಲಿದ್ದ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಬೆನ್ನಟ್ಟಿ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ಕಾರು ಪರಿಶೀಲನೆ ನಡೆಸಿದ ವೇಳೆ ಕಾರಿನ ಹಿಂಬದಿ ಸೀಟ್ ತೆಗೆದು ಅದರ ಮೇಲೆ ನೀಲಿ ಬಣ್ಣದ ಪ್ಲಾಸ್ಟಿಕ್ ಹಾಕಿ ಅದರ ಮೇಲೆ 1 ಗಂಡು ಕರುವನ್ನು ಹಿಂಸಾತ್ಮಕವಾಗಿ ಕಾಲು ಮತ್ತು ತಲೆಯನ್ನು ಹಗ್ಗದಿಂದ ಕಟ್ಟಿ ತುಂಬಿಸಿರುವುದು ಕಂಡು ಬಂದಿದೆ. ಆರೋಪಿಗಳು ಒಂದು ವಾರದಿಂದ ಬೇರೆ ಬೇರೆ ಕಡೆಗಳಿಂದ ದನಗಳನ್ನು ಕಳ್ಳತನ ಮಾಡಿಕೊಂಡು ಬಂದು ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ನಿವಾಸಿ ಸಾಹುಲ್ ಹಮೀದ್ ಅವರ ಮನೆಯ ಬಳಿ ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಸಲುವಾಗಿ ಅಥವಾ ದನಗಳನ್ನು ಕಡಿಯಲೆಂದು ಇತರರಿಗೆ ಮಾರಾಟ ಮಾಡುವ ಸಲುವಾಗಿ ಸಂಗ್ರಹಣೆ ಮಾಡಿರುವುದಾಗಿ ತಿಳಿಸಿರುತ್ತಾರೆ. ಆರೋಪಿಗಳು ದನವನ್ನು ಕಳ್ಳತನ ಮಾಡಿಕೊಂಡು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವುದರಿಂದ ದನ ಸಹಿತ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಆರೋಪಿ ಮೊಹಮ್ಮದ್ ಆರೀಫ್ ಮೇಲೆ ಬಜ್ಪೆ, ಬಣಕಲ್, ಮೂಡಬಿದ್ರೆ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣ ದಾಖಲಾಗಿದ್ದು, ಇನ್ನೋರ್ವ ಆರೋಪಿ ಇಮ್ರಾನ್ ಮೇಲೆಯೂ ಮೂಡಬಿದ್ರೆ ಹಾಗೂ ಕಾರ್ಕಳ ಪೊಲೀಸ್ ಠಾಣೆಗಳಲ್ಲಿ ಸುಮಾರು 5 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.












0 comments:
Post a Comment