ಮಂಗಳೂರಿನಲ್ಲಿ ಕರ್ನಾಟಕ ರಾಜ್ಯ ಪ್ರಗತಿಪರ ಅಟೋ ಚಾಲಕರ ಸಂಘದ ದ.ಕ. ಜಿಲ್ಲಾ ಸಮ್ಮೇಳನ
ಮಂಗಳೂರು, ಜೂನ್ 06, 2026 (ಕರಾವಳಿ ಟೈಮ್ಸ್) : ಅಟೋ ಚಾಲಕರು ಇಂದು ನಿರಂತರವಾಗಿ ಜನರ ಸೇವೆ ಮಾಡುತ್ತಾ ಬರುತ್ತಿದ್ದು, ಆದರೆ ಅವರಿಗೆ ಯಾವುದೇ ಸರಿಯಾದ ಸೌಲಭ್ಯಗಳು ಇಲ್ಲದೆ ಅವರ ಬದುಕು ಅತ್ಯಂತ ಶೋಚನೀಯವಾಗಿದೆ ಎಂದು ಎಐಸಿಸಿಟಿಯು ರಾಜ್ಯಾಧ್ಯಕ್ಷ ಪಿ.ಪಿ. ಅಪ್ಪಣ್ಣ ಆತಂಕ ವ್ಯಕ್ತಪಡಿಸಿದರು.
ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಪ್ರಗತಿಪರ ಅಟೋ ಚಾಲಕರ ಸಂಘ (ಎಐಸಿಸಿಟಿಯು) ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಅಟೋ ಚಾಲಕರು ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಸಂಘಟಿತರಾಗಬೇಕು. ಆ ಮೂಲಕ ಸೌಲಭ್ಯಗಳನ್ನು ಪಡೆಯಲು ಸಾದ್ಯ. ಅದಕ್ಕಾಗಿ ಜಿಲ್ಲೆಯಲ್ಲಿ ಎಐಸಿಸಿಟಿಯು ಸಂಘಟನೆಯನ್ನು ಬಲಿಷ್ಠಗೊಳಿಸುವಂತೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಎಐಸಿಸಿಟಿಯು ಜಿಲ್ಲಾಧ್ಯಕ್ಷ ರಾಮಣ್ಣ ವಿಟ್ಲ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಅಟೋ ಚಾಲಕರು ಹೋರಾಟ ನಡೆಸಿದ ಇತಿಹಾಸ ಇದ್ದು, ಇಂದು ಅಟೋ ಚಾಲಕರ ಮೇಲೆ ಪೆÇೀಲಿಸ್ ಇಲಾಖೆಯಿಂದ, ಸಾರಿಗೆ ಇಲಾಖೆಯಿಂದ ನಿರಂತರ ದೌರ್ಜನ್ಯ ಆಗುತ್ತಿದೆ. ಇದನ್ನು ನಿಲ್ಲಿಸಬೇಕಾದರೆ ಸಂಘಟನೆ ಗಟ್ಟಿಗೊಳ್ಳಬೇಕು ಎಂದರು.
ಹಿರಿಯ ಕಾರ್ಮಿಕ ಮುಖಂಡ ಬಿ ವಿಷ್ಣು ಮೂರ್ತಿ ಮಾತನಾಡಿ, ಅಟೋ ಚಾಲಕರು ಸೈದಾಂತಿಕವಾಗಿ ಸಂಘಟಿತರಾಗಬೇಕೆಂದು ಕರೆ ನೀಡಿದರು.
ಹಿರಿಯ ಅಟೋ ಚಾಲಕ ಹಾಗೂ ಅಟೋ ಚಾಲಕರ ಸಂಘಟನೆಯ ಮಾಜಿ ಮುಖಂಡ ಎಲ್ ಟಿ ಸುವರ್ಣ ಮಾತನಾಡಿ, ಅಟೋ ಚಾಲಕರು ಅಟೋ ಪಾರ್ಕ್ ಮಟ್ಟದಿಂದಲೇ ಸಂಘಟಿತರಾಗಬೇಕೆಂದು ಕರೆ ನೀಡಿದರು.
ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಪಾರ್ ಜಸ್ಟೀಸ್ ಇದರ ಜಿಲ್ಲಾಧ್ಯಕ್ಷ ತುಳಸೀದಾಸ್ ಆರ್ ಮಾತನಾಡಿ ಅಟೋ ಚಾಲಕರು ಸೌಲಭ್ಯ ಗಳನ್ನು ಪಡೆಯಲು ಸಂಘಟಿತರಾಗುವುದರ ಜೊತೆಗೆ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕೆಂದರು.
ಕಾರ್ಮಿಕ ಅಧಿಕಾರಿಗಳಾದ ವಿಲ್ಮ ಎಲಿಜಬೆತ್ ತಾವ್ರೋ ಹಾಗೂ ಬಿ ಆರ್ ಕುಮಾರ್, ವಲಸೆ ಕಾರ್ಮಿಕರ ಸಂಘಟನೆಯ ಜಿಲ್ಲಾ ಮುಖಂಡ ಆಸೀಫ್ ಶುಭ ಹಾರೈಸಿದರು.
ಅಟೋ ಚಾಲಕರ ಸಂಘದ ಹಿರಿಯ ಮುಖಂಡ ಅನ್ಸಾರ್ ಬಜಾಲ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಎಐಸಿಸಿಟಿಯು ಜಿಲ್ಲಾ ಕಾರ್ಯದರ್ಶಿ ಮೋಹನ್ ಕೆ ಇ ಕಾರ್ಯಕ್ರಮ ನಿರೂಪಿಸಿದರು.
ನೂತನ ಜಿಲ್ಲಾಧ್ಯಕ್ಷರಾಗಿ ಅನ್ಸಾರ್ ಬಜಾಲ್ ಆಯ್ಕೆ
ಸಭೆಯಲ್ಲಿ ನೂತನ ಜಿಲ್ಲಾ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವಾದ್ಯಕ್ಷರಾಗಿ ಇಬ್ರಾಹಿಂ, ಅಧ್ಯಕ್ಷರಾಗಿ ಮಹಮ್ಮದ್ ಅನ್ಸಾರ್ ಬಜಾಲ್, ಪ್ರಧಾನ ಕಾರ್ಯದರ್ಶಿಯಾಗಿ ಮೋಹನ್ ಕೆ ಇ, ಕೋಶಾಧಿಕಾರಿಯಾಗಿ ಇಂತಿಯಾಝ್ ಮುಗೇರ್, ಉಪಾಧ್ಯಕ್ಷರುಗಳಾಗಿ ಮುಶ್ತಾಕ್ ಅಲಿ, ಅಬ್ಬಾಸ್ ಮೋರ್ ಪಾರ್ಕ್, ಸಂದೀಪ್ ಶೆಟ್ಟಿ, ಜಾರ್ಜ್ ಕೊಂಚಾಡಿ, ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ಖಾದರ್ ಜಿಲಾನಿ, ಸುಧಾಕರ್, ಬಾಬು, ಭರತ್ ಬೈಕಂಪಾಡಿ, ಜಾವೀದ್, ಸಂಘಟನಾ ಕಾರ್ಯದರ್ಶಿಯಾಗಿ ಬದ್ರುದ್ದೀನ್, ಅಶ್ಫಾಕ್, ಇಂತಿಯಾಝ್ ದೇರಳಕಟ್ಟೆ, ಸಮಿತಿ ಸದಸ್ಯರುಗಳಾಗಿ ಹರೀಶ್, ಸುನೀಲ್ ಕೂಳೂರು, ಇಸ್ಮಾಯಿಲ್ ಕೂಳೂರು, ಯೋಗೇಂದ್ರ, ನಾಗೇಶ್ ಕಟೀಲ್, ಶೌಕತ್ ಆಲಿ ವಿಟ್ಲ, ಮೋನು ದೇರಳಕಟ್ಟೆ, ಅಶ್ರಫ್ ಕೊಯಿಲ, ಗೋಪಾಲ್ ಮೂಡಬಿದ್ರೆ, ರಾಮಣ್ಣ, ರಮೇಶ್ ಪಿಳಿಕುಳ, ಸ್ಟ್ಯಾನ್ಲಿ ಬಜಪೆ, ದೇವದಾಸ್ ಅವರು ಆಯ್ಕೆಯಾದರು.













0 comments:
Post a Comment