ಬಂಟ್ವಾಳ, ಜೂನ್ 12, 2026 (ಕರಾವಳಿ ಟೈಮ್ಸ್) : ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಮೆಸ್ಕಾಂ) ಯನ್ನು ಖಾಸಗೀಕರಣ ನಡೆಸುವ ಬಗ್ಗೆ ಪಯತ್ನ ಸಾಗಿರುವ ಬಗ್ಗೆ ಮೆಸ್ಕಾಂ ಅಧಿಕಾರಿಗಳು ಮತ್ತು ನೌಕರರ ಸಂಘದ ವತಿಯಿಂದ ಬಂಟ್ವಾಳ ವಿಭಾಗ ಕಚೇರಿಯ ಆವರಣದಲ್ಲಿ ಗೇಟ್ ಮೀಟಿಂಗ್ ನಡೆಸಲಾಯಿತು.
ಮೆಸ್ಕಾಂ ವ್ಯಾಪ್ತಿಯ ಕೆಲವು ವಿಭಾಗಗಳಲ್ಲಿ ವಿದ್ಯುತ್ ವಿತರಣೆಗೆ ಖಾಸಗಿ ಸಂಸ್ಥೆಯಾದ ಟಾಟಾ ಪವರ್ ಗೆ ಪರವಾನಗಿ ನೀಡುವ ಪ್ರಸ್ತಾವನೆ ಮಾಡಲಾಗಿದ್ದು, ಈ ಕುರಿತು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆ ಇ ಆರ್ ಸಿ) ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸುವ ಬಗ್ಗೆ ಈ ಸಭೆ ನಡೆದಿದೆ.
ಸಭೆಯಲ್ಲಿ ಮಾತನಾಡಿದ ನಾಯಕರು, ಮೆಸ್ಕಾಂ ಈಗಾಗಲೇ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಸೇವೆ ನೀಡುತ್ತಿದ್ದು, ಸರ್ಕಾರದ ವಿವಿಧ ಜನಪರ ಹಾಗೂ ರೈತಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಯನ್ನು ಖಾಸಗಿ ಸಂಸ್ಥೆಗೆ ವರ್ಗಾಯಿಸುವುದು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟರು.
ಬಂಟ್ವಾಳ ವಿಭಾಗ ಕಚೇರಿಯ ಕಾರ್ಯನಿರ್ವಾಹಕ ಇಂಜಿನಿಯರ್ ಸಂತೋಷ್ ನಾಯಕ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಶಂಕರ್ ಪ್ರಕಾಶ್, ಕೇಂದ್ರ ಸಮಿತಿ ಸದಸ್ಯ ಕರಿಬಸಪ್ಪ ಎಂ ಎಸ್ ಹಾಗೂ ಡಿಪೆÇ್ಲಮಾ ಇಂಜಿನಿಯರ್ ಸಂಘದ ರಾಜ್ಯಾಧ್ಯಕ್ಷ ರಾಮಚಂದ್ರ ಅವರು ಮಾತನಾಡಿ, ಖಾಸಗೀಕರಣದ ವಿರುದ್ಧ ಅಧಿಕಾರಿಗಳು, ನೌಕರರು, ರೈತರು ಮತ್ತು ಸಾರ್ವಜನಿಕರು ಒಗ್ಗಟ್ಟಾಗಿ ಹೋರಾಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ವಿವಿಧ ಪದಾಧಿಕಾರಿಗಳು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಳು, ಶಾಖಾಧಿಕಾರಿಗಳು ಹಾಗೂ ಅನೇಕ ಅಧಿಕಾರಿಗಳು ಮತ್ತು ನೌಕರರು ಭಾಗವಹಿಸಿದ್ದರು. ಲೋಕೇಶ್ ವಂದಿಸಿ, ಸಿದ್ದರಾಜ್ ಕಾರ್ಯಕ್ರಮ ನಿರೂಪಿಸಿದರು.
















0 comments:
Post a Comment