ಬೆಂಗಳೂರು, ಜೂನ್ 30, 2026 (ಕರಾವಳಿ ಟೈಮ್ಸ್) : ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ಇಚ್ಛೆ/ ಆಯ್ಕೆಗಳನ್ನು ದಾಖಲಿಸಲು ಜೂನ್ 30 ಕೊನೆ ದಿನಾಂಕವಾಗಿದ್ದು, ಇಂದಿಗೆ ಮುಕ್ತಾಯಗೊಳ್ಳಲಿದೆ. ಇದುವರೆಗೂ ಆಪ್ಷನ್ಸ್ ಎಂಟ್ರಿ ಮಾಡದವರಿಗೆ ಮೊದಲ ಸುತ್ತಿನ ಅಣಕು ಸೀಟು ಹಂಚಿಕೆ ಫಲಿತಾಂಶ (ಮೋಕ್ ರಿಸಲ್ಟ್)ದ ನಂತರ ಮತ್ತೊಮ್ಮೆ ಆಪ್ಷನ್ ಎಂಟ್ರಿ ದಾಖಲಿಸಲು ಅವಕಾಶ ನೀಡಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಈ ವಿಷಯದಲ್ಲಿ ಆತಂಕ, ಗೊಂದಲ ಬೇಡ. ಸಾಕಷ್ಟು ಸಮಯ ಕೂಡ ಕೊಡಲಾಗಿತ್ತು. ಆದರೂ ಕೆಲವರು ಆಪ್ಷನ್ಸ್ ದಾಖಲು ಮಾಡಿಲ್ಲ. ಅಂತಹವರು ಅಣಕು ಫಲಿತಾಂಶ ಪ್ರಕಟಿಸುವವರೆಗೂ ತಮ್ಮ ಇಷ್ಟದ ಕಾಲೇಜು/ ಕೋರ್ಸ್ ಗಳನ್ನು ಒಂದು ಕಡೆ ಬರೆದಿಟ್ಟುಕೊಂಡು, ನಂತರ ದಾಖಲಿಸಲು ಅವರು ಸಲಹೆ ನೀಡಿದ್ದಾರೆ.
ಮೊದಲ ಸುತ್ತಿನ ಅಣಕು ಫಲಿತಾಂಶದ ನಂತರ ಹೊಸದಾಗಿ ಆಪ್ಷನ್ಸ್ ದಾಖಲಿಸಲು/ ಬದಲಿಸಲು ಅವಕಾಶ ಇರುತ್ತದೆ. ಆ ಸಂದರ್ಭದಲ್ಲಿ ಹೊಸಬರು ಕೂಡ ಆಪ್ಷನ್ಸ್ ದಾಖಲು ಮಾಡಬಹುದು ಎಂದವರು ಹೇಳಿದ್ದಾರೆ.
ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಒಳ ಮೀಸಲಾತಿ ಪ್ರಕಾರ ಹೊಸದಾಗಿ ಜಾತಿ ಪ್ರಮಾಣ ಪತ್ರಗಳನ್ನು ತೆಗೆದುಕೊಳ್ಳಬೇಕಿದ್ದು, ಅದರ ಆರ್ ಡಿ ಸಂಖ್ಯೆ ನಮೂದಿಸಿದರೆ ಮಾತ್ರ ವೆರಿಫಿಕೇಷನ್ ಸ್ಲಿಪ್ ಡೌನ್ ಲೋಡ್ ಆಗುವುದು. ಈ ರೀತಿಯ ಒಳ ಮೀಸಲಾತಿ ಪ್ರಕಾರ ಹೊಸ ಆರ್ ಡಿ ಸಂಖ್ಯೆ ನಮೂದಿಸದ ಇನ್ನೂ ಸುಮಾರು 12,000 ಅಭ್ಯರ್ಥಿಗಳು ಇದ್ದಾರೆ. ಅಂತಹವರಿಗೆ ಜುಲೈ 8ರವರೆಗೆ ಹೊಸ ಆರ್ ಡಿ ಸಂಖ್ಯೆ ನಮೂದಿಸಿಕೊಂಡು, ವೆರಿಫಿಕೇಷನ್ ಸ್ಲಿಪ್ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಅಂತಹವರಿಗೂ ಅಣಕು ಫಲಿತಾಂಶ ನಂತರವೇ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುತ್ತದೆ ಎಂದಿದ್ದಾರೆ.
ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಕ್ರೀಡಾ ಕೋಟಾದಡಿ ಅರ್ಜಿ ಸಲ್ಲಿಸಿರುವ ಒಟ್ಟು 70 ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಅಗತ್ಯ ಇದ್ದು, ಅಂತಹವರು ಜುಲೈ 3ರಂದು ಮೂಲ ದಾಖಲೆಗಳ ಸಮೇತ ಕೆಇಎ ಕಚೇರಿಗೆ ಬರಲು ಸೂಚಿಸಲಾಗಿದೆ ಎಂದ ಪ್ರಸನ್ನ, ಯಾರೆಲ್ಲ ಬರಬೇಕು ಎನ್ನುವ 70 ಅಭ್ಯರ್ಥಿಗಳ ಪಟ್ಟಿಯನ್ನು ಕೆಇಎ ವೆಬ್ ಸೈಟಿನಲ್ಲಿ ಪ್ರಕಟಿಸಿದ್ದು, ಅವರು ಮಾತ್ರ ದಾಖಲೆ ಪರಿಶೀಲನೆಗೆ ಬರಬೇಕು. ಕ್ರೀಡಾ ಪದಕ ಪಡೆದ ಮೂಲ ಪ್ರಮಾಣ ಪತ್ರಗಳ ಸಮೇತ ಬರಲು ಸೂಚಿಸಲಾಗಿದೆ ಎಂದವರು ಹೇಳಿದ್ದಾರೆ.















0 comments:
Post a Comment