ರಾಜ್ಯದಲ್ಲಿ ಡಿಕೆಶಿ ಪರ್ವ ಆರಂಭ : ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ; ಡಿಸಿಎಂ ಆಗಿ ಜಿ ಪರಮೇಶ್ವರ, ಇತರ 13 ಮಂದಿ ಶಾಸಕರು ಕ್ಯಾಬಿನೆಟ್ ಸಚಿವರುಗಳಾಗಿ ಪ್ರಮಾಣ - Karavali Times ರಾಜ್ಯದಲ್ಲಿ ಡಿಕೆಶಿ ಪರ್ವ ಆರಂಭ : ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ; ಡಿಸಿಎಂ ಆಗಿ ಜಿ ಪರಮೇಶ್ವರ, ಇತರ 13 ಮಂದಿ ಶಾಸಕರು ಕ್ಯಾಬಿನೆಟ್ ಸಚಿವರುಗಳಾಗಿ ಪ್ರಮಾಣ - Karavali Times

728x90

3 June 2026

ರಾಜ್ಯದಲ್ಲಿ ಡಿಕೆಶಿ ಪರ್ವ ಆರಂಭ : ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ; ಡಿಸಿಎಂ ಆಗಿ ಜಿ ಪರಮೇಶ್ವರ, ಇತರ 13 ಮಂದಿ ಶಾಸಕರು ಕ್ಯಾಬಿನೆಟ್ ಸಚಿವರುಗಳಾಗಿ ಪ್ರಮಾಣ

ಬೆಂಗಳೂರು, ಜೂನ್ 03, 2026 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಡಿಕೆಶಿ ಪರ್ವ ಆರಂಭವಾಗಿದೆ. 8 ಬಾರಿ ಶಾಸಕರಾಗಿರುವ 64 ರ ಹರೆಯದ ದೊಡ್ಡಲಹಳ್ಳಿ ಕೆಂಪೇಗೌಡ ಶಿವಕುಮಾರ್ (ಡಿ ಕೆ ಶಿವಕುಮಾರ್) ಅವರು ಜೂನ್ 3 ರಂದು ಬುಧವಾರ ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಡಿಕೆಶಿ ಜೊತೆ ಇತರ 13 ಮಂದಿ ಹಿರಿಯ ಶಾಸಕರು ಕ್ಯಾಬಿನೆಟ್ ದರ್ಜೆಯ ಸಚಿವರುಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಜಿ ಪರಮೇಶ್ವರ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಶಿವಕುಮಾರ್ ವೀರ ಗಂಗಾಧರ ಅಜ್ಜಯ್ಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸುವ ಮೊದಲು ಅಜ್ಜಯ್ಯ ಅವರಿಗೆ ಪುಷ್ಪ ನಮನ ಸಲ್ಲಿಸಿದ ಡಿಕೆಶಿ ಭಾರತೀಯ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ಪ್ರಮಾಣ ವಚನ ಸ್ವೀಕರಿಸಿದರು.

ಹಿರಿಯ ಶಾಸಕರಾದ ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ರಾಮಲಿಂಗ ರೆಡ್ಡಿ, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಡಾ ಯು.ಟಿ. ಖಾದರ್, ಈಶ್ವರ್ ಖಂಡ್ರೆ, ಡಾ. ಯತೀಂದ್ರ ಸಿದ್ದರಾಮಯ್ಯ, ಬೈರತಿ ಸುರೇಶ್ ಮತ್ತು ಶರಣ್ ಪ್ರಕಾಶ್ ಪಾಟೀಲ್ ಅವರು ಪ್ರಮಾಣ ವಚನ ಸ್ವೀಕರಿಸಿದ ಇತರ ಸಚಿವರುಗಳು. ಈ ಪೈಕಿ ಯು.ಟಿ. ಖಾದರ್ ಮತ್ತು ಡಾ. ಯತೀಂದ್ರ ಹೊಸದಾಗಿ ಸೇರ್ಪಡೆಗೊಂಡಿದ್ದು, ಬಾಕಿ ಉಳಿದವರು ಈ ಹಿಂದೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದವರಾಗಿದ್ದಾರೆ. 

ಶಿವಕುಮಾರ್ ಅವರ ಪತ್ನಿ ಉಷಾ, ಮಗಳು ಐಶ್ವರ್ಯ ಡಿಕೆಎಸ್ ಹೆಗ್ಡೆ ಮತ್ತು ಇತರ ಕುಟುಂಬ ಸದಸ್ಯರ ಜೊತೆಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಿರ್ಗಮಿತ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ (ಕರ್ನಾಟಕ ಉಸ್ತುವಾರಿ) ರಣದೀಪ್ ಸಿಂಗ್ ಸುರ್ಜೇವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಮತ್ತು ರಾಜ್ಯಸಭಾ ಸದಸ್ಯ ಕೆ.ಸಿ. ವೇಣುಗೋಪಾಲ್, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಕೇರಳ ಸಿಎಂ ವಿ.ಡಿ. ಸತೀಶನ್, ಹಿಮಾಚಲ ಪ್ರದೇಶ ಸಿಎಂ ಸುಖವಿಂದರ್ ಸಿಂಗ್ ಸುಖು, ಕರ್ನಾಟಕದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು, ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ, ಅವರ ಪತ್ನಿ, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ; ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮಿ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಭಾರತೀಯ ತಂಡದ ಹಿರಿಯ ಕ್ರಿಕೆಟಿಗರಾದ ಮೊಹಮ್ಮದ್ ಅಜರುದ್ದೀನ್, ಅನಿಲ್ ಕುಂಬ್ಳೆ, ಖ್ಯಾತ ನಟ ಧನಂಜಯ, ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಮತ್ತು ಗುರುಕಿರಣ್ ಮತ್ತು ನಟಿ-ರಾಜಕಾರಣಿ ರಮ್ಯಾ ಮೊದಲಾದವರು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ರಾಜ್ಯದಲ್ಲಿ ಡಿಕೆಶಿ ಪರ್ವ ಆರಂಭ : ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ; ಡಿಸಿಎಂ ಆಗಿ ಜಿ ಪರಮೇಶ್ವರ, ಇತರ 13 ಮಂದಿ ಶಾಸಕರು ಕ್ಯಾಬಿನೆಟ್ ಸಚಿವರುಗಳಾಗಿ ಪ್ರಮಾಣ Rating: 5 Reviewed By: karavali Times
Scroll to Top