ಪಕ್ಷ ನೀಡಿದ ಎಲ್ಲ ಹುದ್ದೆಗಳನ್ನೂ ಸಮರ್ಥವಾಗಿ ನಿಭಾಯಿಸಿದ್ದೇನೆ, ಮುಂದಕ್ಕೂ ಅದೇ ಹಾದಿಯಲ್ಲಿ ಸಾಗುತ್ತೇನೆ : ಸ್ಪೀಕರ್ ಯು.ಟಿ. ಖಾದರ್ ಹೇಳಿಕೆ - Karavali Times ಪಕ್ಷ ನೀಡಿದ ಎಲ್ಲ ಹುದ್ದೆಗಳನ್ನೂ ಸಮರ್ಥವಾಗಿ ನಿಭಾಯಿಸಿದ್ದೇನೆ, ಮುಂದಕ್ಕೂ ಅದೇ ಹಾದಿಯಲ್ಲಿ ಸಾಗುತ್ತೇನೆ : ಸ್ಪೀಕರ್ ಯು.ಟಿ. ಖಾದರ್ ಹೇಳಿಕೆ - Karavali Times

728x90

2 June 2026

ಪಕ್ಷ ನೀಡಿದ ಎಲ್ಲ ಹುದ್ದೆಗಳನ್ನೂ ಸಮರ್ಥವಾಗಿ ನಿಭಾಯಿಸಿದ್ದೇನೆ, ಮುಂದಕ್ಕೂ ಅದೇ ಹಾದಿಯಲ್ಲಿ ಸಾಗುತ್ತೇನೆ : ಸ್ಪೀಕರ್ ಯು.ಟಿ. ಖಾದರ್ ಹೇಳಿಕೆ

ಮಂಗಳೂರು, ಜೂನ್ 02, 2026 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಜೂನ್ 3 ರಂದು ಬುಧವಾರ ಸಂಜೆ ಡಿ ಕೆ ಶಿವಕುಮಾರ್ ನೇತೃತ್ವದ ನೂತನ ಸರಕಾರ ಅಸ್ತಿತ್ವಕ್ಕೆ ಬರಲಿದ್ದು, ಪ್ರಸ್ತುತ ವಿಧಾನಸಭಾ ಸ್ಪೀಕರ್ ಹುದ್ದೆಯಲ್ಲಿರುವ ಮಂಗಳೂರು ಶಾಸಕ ಡಾ ಯು ಟಿ ಖಾದರ್ ಅವರು ಸಚಿವ ಸಂಪುಟ ಸೇರಲಿದ್ದು, ಮಹತ್ವದ ಖಾತೆ ಪಡೆಯಲಿದ್ದಾರೆ ಎಂಬ ಮಾತುಗಳು ರಾಜ್ಯಾದ್ಯಂತ ಹರಿದಾಡುತ್ತಿದೆ. ಈ ಮಧ್ಯೆ ಸ್ವತಃ ಯು ಟಿ ಖಾದರ್ ಅವರು ಮಂಗಳವಾರ ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ್ದು, ನಾನು ಸದ್ಯಕ್ಕೆ ಸ್ಪೀಕರ್ ಆಗಿ ರಾಜಕೀಯ ರಹಿತ ವ್ಯಕ್ತಿಯಾಗಿಯೇ ಇದ್ದೇನೆ. ಈ ಸಂದರ್ಭದಲ್ಲಿ ಯಾವುದೇ ರಾಜಕೀಯ ಮಾತನಾಡುವುದಿಲ್ಲ. ಯಾವುದೇ ಬೆಳವಣಿಗೆಗಳ ಬಗ್ಗೆ ತನಗೆ ಮಾಹಿತಿ ಇಲ್ಲ. ರಾಜ್ಯದ ಜನರಂತೆ ನಾನೂ ಕೂಡಾ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಬರುತ್ತಿರುವ ಸುದ್ದಿಗಳನ್ನಷ್ಟೆ ಗಮನಿಸುತ್ತಿರುವುದಾಗಿ ತಿಳಿಸಿದ್ದಾರೆ. 

ನಾನು ಯಾವುದೇ ಹುದ್ದೆಯ ಬಗ್ಗೆ ಆಕಾಂಕ್ಷಿತ್ವ ಪ್ರಕಟಿಸಿಲ್ಲ. ಹುದ್ದೆ ನೀಡುವುದು ಏನಿದ್ದರೂ ಪಕ್ಷದ ಹೈಕಮಾಂಡಿಗೆ ಬಿಟ್ಟ ವಿಚಾರ. ಈ ಹಿಂದೆಯೂ ಪಕ್ಷ ನೀಡಿದ ಎಲ್ಲಾ ಹುದ್ದೆಗಳನ್ನೂ ಸಮರ್ಥವಾಗಿ ನಿಭಾಯಿಸಿದ್ದೇನೆ. ಮುಂದೆಯೂ ಪಕ್ಷ ನೀಡಿದ ಹುದ್ದೆಯನ್ನು ನಿಭಾಯಿಸಲಿದ್ದೇನೆ ಎಂದಷ್ಟೆ ಹೇಳಬಲ್ಲೆ ಎಂದರು. 

ಪಕ್ಷಕ್ಕಿಂತ ವ್ಯಕ್ತಿ ಯಾವತ್ತೂ ದೊಡ್ಡವನಾಗುವುದಿಲ್ಲ. ಪಕ್ಷ ಬಿಟ್ಟು ಹೋದವರ ಬಗ್ಗೆ ನಾನು ಹೇಳಬೇಕಾಗಿಲ್ಲ. ಈ ಬಗ್ಗೆ ನೀವೇ ಬಲ್ಲಿರಿ ಎಂದು ಮಾರ್ಮಿಕವಾಗಿ ನುಡಿದ ಯು ಟಿ ಖಾದರ್, ಸ್ಪೀಕರ್ ಹುದ್ದೆ ರಾಜಕೀಯ ಜೀವನದಲ್ಲಿ ವಿಶೇಷ ಅನುಭವ ನೀಡಿದ್ದು, ಸರಕಾರ ಹಾಗೂ ವಿರೋಧ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ಪಡೆದುಕೊಂಡು ಸದನವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರ ಮಟ್ಟದಲ್ಲಿ ಸ್ಪೀಕರ್ ಹುದ್ದೆಯ ಘನತೆ-ಗೌರವವನ್ನು ಎತ್ತಿ ಹಿಡಿದಿದ್ದೇನೆ ಎಂಬ ಹೆಮ್ಮೆ ನನಗಿದೆ ಎಂದರು. 

ಕಳೆದ ಬಾರಿ ಸರಕಾರ ರಚನೆ ಸಂದರ್ಭದಲ್ಲೂ ನನಗೆ ಸಚಿವ ಸ್ಥಾನ ನೀಡಲಾಗುತ್ತಿದೆ ಎಂಬ ಬಗ್ಗೆ ಜನ ಚರ್ಚೆ ಮಾಡಿದ್ದರು. ಆದರೆ ನನಗೆ ಘನವೆತ್ತ ಸ್ಪೀಕರ್ ಹುದ್ದೆಯ ಜವಾಬ್ದಾರಿಯನ್ನು ವಹಿಸಲಾಯಿತು. ನಾನು ಆ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದೇನೆ ಎಂದ ಖಾದರ್, ಹುದ್ದೆ ಮುಖ್ಯವಲ್ಲ, ಜನರ ಕೆಲಸ ಮಾಡುವುದು ಮುಖ್ಯ. ಶಾಸಕರ ಕೆಲಸ ನೋಡಿಕೊಂಡು ಪಕ್ಷದ ಹೈಕಮಾಂಡ್ ಜವಾಬ್ದಾರಿ ನೀಡುತ್ತದೆ. ಅದನ್ನು ನಿಭಾಯಿಸುವುದು ನಮ್ಮ ಕರ್ತವ್ಯ ಎನ್ನುವ ಮೂಲಕ ಅಡ್ಡಗೋಡೆಯ ಮೇಲೆ ದೀಪವಿಟ್ಟರು. 

ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ನನ್ನ ಕ್ಷೇತ್ರದ ಮತದಾರರು ನನಗೆ ಪ್ರಮುಖವಾಗಿದ್ದು, ಅವರ ಸೇವೆಯನ್ನು ಎಂದಿಗೂ ಮಾಡುತ್ತಲೇ ಬಂದಿದ್ದೇನೆ. ಮುಂದಕ್ಕೂ ಅದನ್ನು ಮಾಡುತ್ತೇನೆ. ಪಕ್ಷದ ನೀಡುವ ಜವಾಬ್ದಾರಿಯ ಬಗ್ಗೆ ಈ ಸಂದರ್ಭ ನಾನು ಮಾತನಾಡಲು ಇಷ್ಟಪಡುವುದಿಲ್ಲ. ನಾನು ಈಗಲೂ ಸ್ಪೀಕರ್ ಹುದ್ದೆಯಲ್ಲಿದ್ದು, ಪಕ್ಷಾತೀತವಾಗಿಯೇ ಇರಬೇಕಾಗಿದೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕಿದರೆ ಆ ಸಂದರ್ಭದಲ್ಲಿ ರಾಜಕೀಯ ಮಾತನಾಡುತ್ತೇನೆ ಎಂದು ನಗೆ ಚಟಾಕಿ ಹಾರಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಪಕ್ಷ ನೀಡಿದ ಎಲ್ಲ ಹುದ್ದೆಗಳನ್ನೂ ಸಮರ್ಥವಾಗಿ ನಿಭಾಯಿಸಿದ್ದೇನೆ, ಮುಂದಕ್ಕೂ ಅದೇ ಹಾದಿಯಲ್ಲಿ ಸಾಗುತ್ತೇನೆ : ಸ್ಪೀಕರ್ ಯು.ಟಿ. ಖಾದರ್ ಹೇಳಿಕೆ Rating: 5 Reviewed By: karavali Times
Scroll to Top