ಡೇಟಾ ಸೆಂಟರ್ ನಿರ್ವಹಣೆ ಹಿನ್ನಲೆ : ಇಂದು ರಾತ್ರಿ 7 ಗಂಟೆಯಿಂದ 2 ದಿನ ಸರ್ವರ್ ಸಮಸ್ಯೆ ಸಾಧ್ಯತೆ, ಸಹಕರಿಸಲು ಸಚಿವ ಪ್ರಿಯಾಂಕ್ ಖರ್ಗೆ ಮನವಿ - Karavali Times ಡೇಟಾ ಸೆಂಟರ್ ನಿರ್ವಹಣೆ ಹಿನ್ನಲೆ : ಇಂದು ರಾತ್ರಿ 7 ಗಂಟೆಯಿಂದ 2 ದಿನ ಸರ್ವರ್ ಸಮಸ್ಯೆ ಸಾಧ್ಯತೆ, ಸಹಕರಿಸಲು ಸಚಿವ ಪ್ರಿಯಾಂಕ್ ಖರ್ಗೆ ಮನವಿ - Karavali Times

728x90

25 June 2026

ಡೇಟಾ ಸೆಂಟರ್ ನಿರ್ವಹಣೆ ಹಿನ್ನಲೆ : ಇಂದು ರಾತ್ರಿ 7 ಗಂಟೆಯಿಂದ 2 ದಿನ ಸರ್ವರ್ ಸಮಸ್ಯೆ ಸಾಧ್ಯತೆ, ಸಹಕರಿಸಲು ಸಚಿವ ಪ್ರಿಯಾಂಕ್ ಖರ್ಗೆ ಮನವಿ

ಬೆಂಗಳೂರು, ಜೂನ್ 25, 2026 (ಕರಾವಳಿ ಟೈಮ್ಸ್) : ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಡಿಜಿಟಲ್ ಸೇವೆಗಳಿಗೆ ಕೇಂದ್ರ ಬಿಂದುವಾಗಿರುವ ರಾಜ್ಯ ಡೇಟಾ ಸೆಂಟರ್‍ ನಲ್ಲಿ ಮಹತ್ವದ ತಾಂತ್ರಿಕ ನಿರ್ವಹಣೆ, ಮೂಲಸೌಕರ್ಯ ನವೀಕರಣ ಹಾಗೂ ಭದ್ರತಾ ಸುಧಾರಣೆ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ ಎರಡು ದಿನಗಳ ಕಾಲ ಅಂದರೆ ಜೂನ್ 25 ರಂದು ರಾತ್ರಿ 7 ಗಂಟೆಯಿಂದ ಜೂನ್ 26 ರ ರಾತ್ರಿ 9 ಗಂಟೆವರೆಗೆ ಡೇಟಾ ಸೆಂಟರ್ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ ಎಂದು ರಾಜ್ಯ ಗೃಹ ಮತ್ತು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ. 

ರಾಜ್ಯ ಸರ್ಕಾರದ ಅನೇಕ ಇಲಾಖೆಗಳ ವೆಬ್ ಪೆÇೀರ್ಟಲ್‍ಗಳು, ನಾಗರಿಕ ಸೇವಾ ವ್ಯವಸ್ಥೆಗಳು, ವಿವಿಧ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದ ಆನ್ ಲೈನ್ ಸೇವೆಗಳು, ಇ-ಆಫೀಸ್ ವ್ಯವಸ್ಥೆಗಳು, ಇಲಾಖೆಗಳ ಡಿಜಿಟಲ್ ಡೇಟಾ ಬೇಸ್ ಗಳು ಸೇರಿದಂತೆ ಹಲವು ತಂತ್ರಜ್ಞಾನ ಆಧಾರಿತ ಸರ್ಕಾರಿ ಸೇವೆಗಳು ಈ ಡೇಟಾ ಸೆಂಟರ್ ಮೂಲಕ ಕಾರ್ಯನಿರ್ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ನಿರ್ವಹಣಾ ಕಾರ್ಯ ನಡೆಯುವ ಅವಧಿಯಲ್ಲಿ ಕೆಲವು ಸೇವೆಗಳ ಲಭ್ಯತೆಯಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. 

ರಾಜ್ಯದ ಡಿಜಿಟಲ್ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಬಲಿಷ್ಠ ಮತ್ತು ಸುರಕ್ಷಿತವಾಗಿಸಲು ಹಾಗೂ ಸಾಮರ್ಥ್ಯ ಹೆಚ್ಚಿಸಲು ಈ ನಿರ್ವಹಣಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಭವಿಷ್ಯದಲ್ಲಿ ನಾಗರಿಕರಿಗೆ ಇನ್ನಷ್ಟು ವೇಗವಾಗಿ, ಯಾವುದೇ ತಾಂತ್ರಿಕ ಅಡಚಣೆಗಳಿಲ್ಲದೆ ಮತ್ತು ಸುರಕ್ಷಿತ ರೀತಿಯಲ್ಲಿ ಸರ್ಕಾರಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಈ ಅಪ್ ಗ್ರೇಡ್ ಅತ್ಯಂತ ಅಗತ್ಯವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಡಿಜಿಟಲ್ ಸೇವೆಗಳ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಇದರಿಂದ ಡೇಟಾ ಸಂಸ್ಕರಣಾ ಸಾಮರ್ಥ್ಯ, ಸೈಬರ್ ಭದ್ರತೆ, ಸರ್ವರ್ ಕಾರ್ಯಕ್ಷಮತೆ ಹಾಗೂ ಸೇವೆಗಳ ಸ್ಥಿರತೆಯನ್ನು ಸುಧಾರಿಸುವ ಅಗತ್ಯ ಎದುರಾಗಿದೆ. ಇದೇ ಕಾರಣಕ್ಕೆ ತಜ್ಞರ ಸಲಹೆ ಮೇರೆಗೆ ಈ ನಿರ್ವಹಣಾ ಕಾರ್ಯವನ್ನು ನಡೆಸಲಾಗುತ್ತಿದೆ. 

ಈ ಎರಡು ದಿನಗಳ ಅವಧಿಯಲ್ಲಿ ಸಾರ್ವಜನಿಕರು ಸರ್ಕಾರಿ ಆನ್ ಲೈನ್ ಸೇವೆಗಳನ್ನು ಬಳಸುವಾಗ ಕೆಲವು ತಾತ್ಕಾಲಿಕ ಅಡಚಣೆಗಳನ್ನು ಎದುರಿಸಬಹುದು. ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗಬಾರದೆಂದು ರಜಾ ದಿನಗಳಲ್ಲಿ ನಿರ್ವಹಣಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡುವಂತೆ ಸಚಿವ ಖರ್ಗೆ ಕೋರಿದ್ದಾರೆ. 

ಇದು ತಾತ್ಕಾಲಿಕ ಅಸೌಕರ್ಯ ಮಾತ್ರ. ಆದರೆ ಈ ಕಾರ್ಯ ಪೂರ್ಣಗೊಂಡ ನಂತರ ರಾಜ್ಯದ ಇ-ಆಡಳಿತ ವ್ಯವಸ್ಥೆ ಮತ್ತಷ್ಟು ಸುಧಾರಣೆಗೊಳ್ಳಲಿದೆ. ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ನಿರಂತರವಾಗಿ ತಂತ್ರಜ್ಞಾನ ಹೂಡಿಕೆಯನ್ನು ಮಾಡುತ್ತಿದೆ. ಕರ್ನಾಟಕವನ್ನು ದೇಶದಲ್ಲೇ ಅತ್ಯುತ್ತಮ ಡಿಜಿಟಲ್ ಆಡಳಿತ ವ್ಯವಸ್ಥೆ ಹೊಂದಿರುವ ರಾಜ್ಯವನ್ನಾಗಿ ರೂಪಿಸುವ ಗುರಿಯಿಂದ ಕ್ರಮ ಬದ್ಧವಾಗಿ ತಂತ್ರಜ್ಞಾನ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸಲು ಗ್ಯಾರಂಟಿ ಸರ್ಕಾರ ಬದ್ಧವಾಗಿದೆ ಎಂದವರು ಹೇಳಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಡೇಟಾ ಸೆಂಟರ್ ನಿರ್ವಹಣೆ ಹಿನ್ನಲೆ : ಇಂದು ರಾತ್ರಿ 7 ಗಂಟೆಯಿಂದ 2 ದಿನ ಸರ್ವರ್ ಸಮಸ್ಯೆ ಸಾಧ್ಯತೆ, ಸಹಕರಿಸಲು ಸಚಿವ ಪ್ರಿಯಾಂಕ್ ಖರ್ಗೆ ಮನವಿ Rating: 5 Reviewed By: karavali Times
Scroll to Top