ಹದಗೆಟ್ಟ ಕಾವಳಕಟ್ಟೆ-ಧೂಮಳಿಕೆ ರಸ್ತೆ : ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೈರಾಣು - Karavali Times ಹದಗೆಟ್ಟ ಕಾವಳಕಟ್ಟೆ-ಧೂಮಳಿಕೆ ರಸ್ತೆ : ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೈರಾಣು - Karavali Times

728x90

9 June 2026

ಹದಗೆಟ್ಟ ಕಾವಳಕಟ್ಟೆ-ಧೂಮಳಿಕೆ ರಸ್ತೆ : ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೈರಾಣು

ಬಂಟ್ವಾಳ, ಜೂನ್ 09, 2026 (ಕರಾವಳಿ ಟೈಮ್ಸ್) : ಕಾವಳಮೂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾವಳಕಟ್ಟೆ-ಧೂಮಳಿಕೆ ಸಂಪರ್ಕದ ರಸ್ತೆಯೊಂದು ಕಳೆದ ಹಲವು ಸಮಯಗಳಿಂದ ತೀವ್ರ ನಾದುರಸ್ತಿಯಲ್ಲಿದ್ದು, ಸ್ಥಳೀಯರು ನಡೆದಾಡಲೂ ಹೆಣಗಾಟ ನಡೆಸಬೇಕಾದ ಪರಿಸ್ಥಿತಿ ಉಂಟಾಗಿದೆ. 

ಬಂಟ್ವಾಳ-ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲೇ ಬರುವ ಈ ಸಂಪರ್ಕ ರಸ್ತೆಯ ಅವ್ಯವಸ್ಥೆಯಿಂದಾಗಿ ಜನ ನರಕ ಯಾತನೆ ಅನುಭವಿಸುವಂತಾಗಿದೆ. ರಸ್ತೆಯುದ್ದಕ್ಕೂ ಹೊಂಡ-ಗುಂಡಿಗಳೇ ರಾರಾಜಿಸುತ್ತಿದ್ದು, ಮಳೆಗಾಲದಲ್ಲಂತೂ ಜನ ಸಂಚರಿಸಲಾಗದೆ ಹೈರಾಣಾಗಿದ್ದಾರೆ.  ಕಾವಳಮೂಡೂರು ಗ್ರಾಮ ಪಂಚಾಯತ್ ಕಚೇರಿಯ ಮುಂಭಾಗದಲ್ಲೇ ಈ ರಸ್ತೆ ಹಾದು ಹೋಗುತ್ತಿದ್ದು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. 

ಸುಮಾರು 500ಕ್ಕೂ ಅಧಿಕ ಜನ ಈ ರಸ್ತೆಯನ್ನು ಅವಲಂಬಿಸಿದ್ದಾರೆ. ಈ ರಸ್ತೆಯಲ್ಲಿ ಸಂಚರಿಸುವ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು, ವಿವಿಧ ಉದ್ಯೋಗಕ್ಕೆ ತೆರಳುವವರು, ಹಿರಿಯ ನಾಗರಿಕರ ಸಹಿತ ಸಾರ್ವಜನಿಕರು ಇದೇ ರಸ್ತೆಯನ್ನೇ ಮುಖ್ಯ ಸಂಪರ್ಕ ಮಾರ್ಗವಾಗಿ ಬಳಸುತ್ತಿದ್ದಾರೆ. ಆದರೆ ರಸ್ತೆಯುದ್ದಕ್ಕೂ ಬಿದ್ದಿರುವ ಬೃಹತ್ ಹೊಂಡಗಳು, ಕೆಸರು ಮತ್ತು ಕಲ್ಲುಗಳಿಂದ ಸಂಚಾರ ದುಸ್ತರವಾಗಿದ್ದು, ಪ್ರತಿದಿನವೂ ಜನರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಕಳೆದ ಹನ್ನೆರಡು ವರ್ಷಗಳಿಂದ ಈ ರಸ್ತೆಗೆ ಸಮರ್ಪಕ ಡಾಮರೀಕರಣ ನಡೆದಿಲ್ಲ. ಪರಿಣಾಮವಾಗಿ ರಸ್ತೆಯ ಅಸ್ತಿತ್ವವೇ ಕಣ್ಮರೆಯಾಗಿದ್ದು, ಹೊಂಡಗಳ ನಡುವೆ ರಸ್ತೆ ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಕೆಸರುಮಯವಾಗುತ್ತಿದ್ದು, ದ್ವಿಚಕ್ರ ವಾಹನ ಸವಾರರ ಪಾಡಂತೂ ಹೇಳತೀರದಂತಾಗಿದೆ. ನಿತ್ಯವೂ ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬೀಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. 

ಇಲ್ಲಿನ ರಸ್ತೆ ಕಾಯಕಲ್ಪಕ್ಕಾಗಿ ಸ್ಥಳೀಯರು ಹಲವು ಬಾರಿ ಗ್ರಾಮ ಪಂಚಾಯತ್ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದರೂ ಸ್ಪಂದನೆ ಮಾತ್ರ ಶೂನ್ಯವಾಗಿದೆ ಎನ್ನುತ್ತಾರೆ ಸ್ಥಳೀಯರು. ಪ್ರತೀ ವರ್ಷ ಹೊಂಡಗಳಿಗೆ ಮಣ್ಣು ಹಾಕುವ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗುತ್ತಿದ್ದರೂ ಅದು ಮಳೆಯಲ್ಲಿ ಕೊಚ್ಚಿ ಹೋಗಿ ರಸ್ತೆಯ ಯಥಾಸ್ಥಿತಿ ಮತ್ತೆ ಅನಾವರಣಗೊಳ್ಳುತ್ತಲೇ ಇದೆ. 

ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿದಿನ ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿದ್ದು, ಶಾಲಾ-ಕಾಲೇಜು ವಾಹನಗಳು ಕೂಡಾ ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿರುವ ಪರಿಣಾಮ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಎದ್ದು ಬಿದ್ದು ತೆರಳಬೇಕಾದ ದುಸ್ಥಿತಿ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತುರ್ತು ವಾಹನ ಸಹಿತ ಅಗತ್ಯ ಸೇವೆಗಳ ವಾಹನಗಳ ಸಂಚಾರಕ್ಕೂ ಇಲ್ಲಿನ ರಸ್ತೆ ಯೋಗ್ಯವಾಗಿಲ್ಲ. ಗ್ರಾಮಸ್ಥರ ನಿತ್ಯ ಸಂಚಾರಕ್ಕೆ ಅನುಕೂಲವಾಗಿರುವ ಈ ರಸ್ತೆಯ ಕಾಯಕಲ್ಪಕ್ಕೆ ಸಂಬಂಧಪಟ್ಟ ಪ್ರತಿನಿಧಿಗಳು ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಹದಗೆಟ್ಟ ಕಾವಳಕಟ್ಟೆ-ಧೂಮಳಿಕೆ ರಸ್ತೆ : ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೈರಾಣು Rating: 5 Reviewed By: karavali Times
Scroll to Top