ಕೊಳಕೆ : ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರ ದಾರುಣ ಮೃತ್ಯು - Karavali Times ಕೊಳಕೆ : ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರ ದಾರುಣ ಮೃತ್ಯು - Karavali Times

728x90

18 June 2026

ಕೊಳಕೆ : ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರ ದಾರುಣ ಮೃತ್ಯು

ಬಂಟ್ವಾಳ, ಜೂನ್ 18, 2026 (ಕರಾವಳಿ ಟೈಮ್ಸ್) : ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಸಜಿಪಮೂಡ ಗ್ರಾಮದ ಕೊಳಕೆ ಎಂಬಲ್ಲಿ ಗುರುವಾರ ಸಂಜೆ ವೇಳೆ ಸಂಭವಿಸಿದೆ. 

ಮೃತ ಸ್ಕೂಟರ್ ಸವಾರನನ್ನು ಸಜಿಪನಡು ಗ್ರಾಮದ ಮಡಿವಾಳಚ್ಚಿಲ್-ಮುಹಿಯುದ್ದೀನ್ ನಗರ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಅಹ್ಮದ್ ಅಸೀರ್ (22) ಎಂದು ಹೆಸರಿಸಲಾಗಿದೆ. ಸಜಿಪನಡು ಜಂಕ್ಷನ್ನಿನಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಅಸೀರ್ ವ್ಯವಹಾರಕ್ಕೆ ಸಂಬಂಧಿಸಿದ ಹಣ ಪಾವತಿಗೆ ಬೇಂಕೆ ಕಡೆ ಗುರುವಾರ ಸಂಜೆ ತನ್ನ ಆಕ್ಟಿವಾ ಸ್ಕೂಟರಿನಲ್ಲಿ ಬರುತ್ತಿದ್ದ ವೇಳೆ ಎದುರಿನಿಂದ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದವರ ಕಾರಿನ ಚಾಲಕ ವಾಹನವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಭೀಕರ ಅಪಘಾತದ ಪರಿಣಾಮ ರಸ್ತೆಗೆಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡ ಅಸೀರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಆಕ್ಟಿವಾ ಸ್ಕೂಟರ್ ಸಂಪೂರ್ಣ ಜಖಂಗೊಂಡಿದೆ.

ಅಬ್ದುಲ್ ರಹಿಮಾನ್ ಅವರ ಐವರು ಪುತ್ರರು ಹಾಗೂ ಮೂವರು ಪುತ್ರಿಯರ ಪೈಕಿ ಮೂರನೇಯವನಾಗಿರುವ ಮೃತ ಅಸೀರ್ ಅವರು ಎಸ್ಕೆಸ್ಸೆಸ್ಸೆಫ್ ಸಂಘಟನೆಯ ಸಮಾಜಮುಖಿ ವಿಖಾಯ ಸಂಘಟನೆಯ ಆಕ್ಟಿವ್ ವಿಂಗ್ ಸದಸ್ಯರಾಗಿದ್ದು, ಸಮಾಜ ಸೇವಾ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದನಲ್ಲದೆ ಸ್ಥಳೀಯ ಮಸೀದಿಯಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಸದಾ ಹಾಜರಿರುತ್ತಿದ್ದ ಎಂದು ಸ್ಥಳೀಯರು ಅಸೀರ್ ಅಕಾಲಿಕ ಮರಣಕ್ಕೆ ಕಂಬನಿ ಮಿಡಿದಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಶವಾಗಾರಕ್ಕೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಗುರುವಾರ ರಾತ್ರಿ ವೇಳೆ ಕುಟುಂಬಕರಿಗೆ ಹಸ್ತಾಂತರಿಸಲಾಗುವುದು. ಮೃತ ಅಸೀರ್ ಅವರ ಇಬ್ಬರು ಸಹೋದರರು ಹಾಗೂ ಮೂವರು ಸಹೋದರಿಯರಿಗೆ ವಿವಾಹವಾಗಿದ್ದು, ಸದ್ಯದಲ್ಲೇ ಅಸೀರ್ ಅವರು ವೈವಾಹಿಕ ಜೀವನಕ್ಕೆ ಕಾಲಿಡುವ ಸಿದ್ದತೆಯಲ್ಲಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮೃತ ಅಸೀರ್ ತಂದೆ-ತಾಯಿ, ಸಹೋದರರು-ಸಹೋದರಿಯರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕೊಳಕೆ : ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರ ದಾರುಣ ಮೃತ್ಯು Rating: 5 Reviewed By: karavali Times
Scroll to Top