ಬಂಟ್ವಾಳ, ಜೂನ್ 01, 2026 (ಕರಾವಳಿ ಟೈಮ್ಸ್) : ಧಾರ್ಮಿಕ ಕಾರ್ಯಕ್ರಮ ನಡೆದ ಮನೆಯಲ್ಲಿ ಯುವಕನೋರ್ವ ತನ್ನ ಚಿಕ್ಕಪ್ಪನನ್ನೇ ಬಿಯರ್ ಬಾಟ್ಲಿಯಿಂದ ಇರಿದು ಕೊಲೆಗೈದ ಘಟನೆ ಪಿಲಾತಬೆಟ್ಟು ಗ್ರಾಮದ ಕಾಡಬೆಟ್ಟು ಎಂಬಲ್ಲಿ ಮೇ 31 ರಂದು ರಾತ್ರಿ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಇಲ್ಲಿನ ನಿವಾಸಿ ಮಧುಸೂಧನ್ (38) ಎಂದು ಹೆಸರಿಸಲಾಗಿದ್ದು, ಮೃತರ ಸ್ವತಃ ಅಣ್ಣ ಕೇಶವ ಎಂಬವರ ಪುತ್ರ ರಾಹುಲ್ (23) ಎಂಬಾತನೇ ಕೊಲೆ ಆರೋಪಿಯಾಗಿದ್ದಾನೆ. ಮೃತರ ಮತ್ತೋರ್ವ ಸಹೋದರ ಶೇಖರ (43) ಎಂಬವರ ಮನೆಯಲ್ಲಿ ಮೇ 31 ರಂದು ರಾತ್ರಿ ಧಾರ್ಮಿಕ ಕಾರ್ಯಕ್ರಮವಿತ್ತು. ಸದ್ರಿ ಕಾರ್ಯಕ್ರಮಕ್ಕೆ ಕುಟುಂಬದ ಸದಸ್ಯರುಗಳು ಹಾಜರಾಗಿದ್ದರು. ಈ ವೇಳೆ ಮಧುಸೂಧನ್ ಅವರು ಆರೋಪಿ ರಾಹುಲ್ ಎಂಬಾತನಿಗೆ ಕೆಲಸದ ವಿಚಾರದಲ್ಲಿ ತಗಾದೆ ತೆಗೆದಿರುತ್ತಾರೆ. ಇದರಿಂದ ಕೋಪಗೊಂಡ ಆರೋಪಿ ರಾಹುಲ್ ಅಲ್ಲಿಂದ ತೆರಳಿರುತ್ತಾನೆ. ಕಾರ್ಯಕ್ರಮ ಮುಗಿದ ಬಳಿಕ ಮನೆಯ ಸಮೀಪ ಬೊಬ್ಬೆ ಕೇಳಿದ್ದು, ಅಲ್ಲಿಗೆ ಮನೆ ಮಾಲಿಕ ಶೇಖರ ಅವರು ತೆರಳಿ ನೋಡಿದಾಗ ಆರೋಪಿ ರಾಹುಲ್ ಬಿಯರ್ ಬಾಟ್ಲಿಯಿಂದ ಮಧುಸೂದನ್ ಅವರಿಗೆ ತಿವಿದಿರುವುದು ಕಂಡು ಬಂದಿದೆ.
ಬಾಟ್ಲಿ ಇರಿತದಿಂದ ಗಂಭೀರ ಗಾಯಗೊಂಡಿದ್ದ ಮಧುಸೂಧನ್ ಅವರನ್ನು ತಕ್ಷಣ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆರೋಪಿ ರಾಹುಲ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment