ಪ್ರಜಪ್ರಭುತ್ವ ವ್ಯವಸ್ಥೆ ಉಳಿಸಿಕೊಳ್ಳಲು ಯುವಜನತೆ ಒಗ್ಗಟ್ಟಾಗಬೇಕು : ಕ್ಲಿಪ್ಟನ್ ಡಿ ರೊಜಾರಿಯೋ - Karavali Times ಪ್ರಜಪ್ರಭುತ್ವ ವ್ಯವಸ್ಥೆ ಉಳಿಸಿಕೊಳ್ಳಲು ಯುವಜನತೆ ಒಗ್ಗಟ್ಟಾಗಬೇಕು : ಕ್ಲಿಪ್ಟನ್ ಡಿ ರೊಜಾರಿಯೋ - Karavali Times

728x90

7 June 2026

ಪ್ರಜಪ್ರಭುತ್ವ ವ್ಯವಸ್ಥೆ ಉಳಿಸಿಕೊಳ್ಳಲು ಯುವಜನತೆ ಒಗ್ಗಟ್ಟಾಗಬೇಕು : ಕ್ಲಿಪ್ಟನ್ ಡಿ ರೊಜಾರಿಯೋ

ಬಂಟ್ವಾಳ, ಜೂನ್ 07, 2026 (ಕರಾವಳಿ ಟೈಮ್ಸ್) : ಇಂದು ಭಾರತವು ಬಂಡವಾಳಶಾಹಿ ವ್ಯವಸ್ಥೆಯ ಕಾರಣದಿಂದಾಗಿ ಅಧೋಗತಿಗೆ ತಲುಪಿದ್ದು, ಯುವ ಜನತೆ ಇದರ ವಿರುದ್ಧ ಜಾಗೃತರಾಗಬೇಕಿದೆ ಎಂದು  ಸಿಪಿಐಎಂಎಲ್ ಲಿಬರೇಶನ್ ರಾಜ್ಯ ಕಾರ್ಯದರ್ಶಿ ಕ್ಲಿಪ್ಟನ್ ಡಿ ರೊಜಾರಿಯೋ ಹೇಳಿದರು.

ಬಿ ಸಿ ರೋಡಿನ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಜೂನ್ 7 ರಂದು ನಡೆದ ಕ್ರಾಂತಿಕಾರಿ ಯುವಜನ ಸಂಘಟನೆ (ಆರ್ ವೈ ಎ) ರಾಜ್ಯ ಸಮಾವೇಶ ಹಾಗೂ ಪ್ರಸ್ತುತ ದೇಶದ ಮುಂದಿರುವ ಸವಾಲುಗಳಲ್ಲಿ ವಿದ್ಯಾರ್ಥಿ ಯುವ ಜನತೆಯ ಪಾತ್ರ ಎಂಬ ವಿಚಾರದಲ್ಲಿ  ನಡೆದ ವಿಚಾರ ಸಂಕಿರಣವನ್ನುದ್ದೇಶಿಸಿ ಮಾತನಾಡಿದ ಅವರು,  ಪ್ರಸ್ತುತ ದೇಶದಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಯುವಕರಿದ್ದು, ಯುವಜನತೆಗೆ ದೇಶದ ಮುಂದಿರುವ ಸವಾಲುಗಳ ಬಗ್ಗೆ ಅರಿವಿನ ಕೊರತೆ ಇದೆ ಎಂದು ಆರೋಪಿಸಿದರು. 

ಬಂಡವಾಳಶಾಹಿ ವ್ಯವಸ್ಥೆಯ ಕಾರಣದಿಂದ ಯುವಕರಲ್ಲಿ ಚಿಂತನ ಕ್ರಮವೇ ಇಲ್ಲದಾಗಿದ್ದು, ಇದರಿಂದಾಗಿ ದೇಶ ಇಂದು ಸಂದಿಗ್ಧ ಪರಿಸ್ಥಿತಿಯಲ್ಲಿದೆ ಎಂದ ಅವರು, ಯುವಜನತೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಒಗ್ಗಟ್ಟಾಗಬೇಕೆಂದು ಕರೆ ನೀಡಿದಲ್ಲದೆ ಯುವಜನತೆ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳದೆ ಇದ್ದರೆ ಪ್ರಭುತ್ವದ ಗುಲಾಮರಾಗಿ ಬದುಕುವ ಪರಿಸ್ಥಿತಿ ಬರುತ್ತದೆ ಎಂದರು. 

ಸಮಾವೇಶ ಉದ್ಘಾಟಿಸಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ, ಯುವ ಭಾರತದಲ್ಲಿ ಯುವಕರೇ ದೇಶವನ್ನು ಮುನ್ನಡೆಸುವವರಾಗಬೇಕು. ಆದರೆ ಇಂದು ಯುವಜನತೆ ದೇಶದ ಬಗ್ಗೆ ನಿಜವಾದ ಕಾಳಜಿ ವಹಿಸದೇ ಮೌನವಾಗಿದ್ದಾರೆ. ಯುವಜನತೆ ಒಂದು ಸ್ಪಷ್ಟ ಉದ್ದೇಶದಿಂದ ಸಂಘಟಿತರಾಗಬೇಕು ಹಾಗೂ ಈ ದೇಶದ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಕರೆ ನೀಡಿದರು. ಇಂದು ಸರಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲದಾಗಿದ್ದು, ಇಂದು ಹುಟ್ಟುವ ಮಗು ಕೂಡಾ ಎರಡು ಲಕ್ಷ ಸಾಲದಲ್ಲಿದೆ, ಆರ್ ಬಿ ಐ ಚಿನ್ನ ಮಾರಾಟ ಮಾಡುತ್ತಿದೆ. ಇದು ದೇಶದ ಆರ್ಥಿಕ ದಿವಾಳಿತನವನ್ನು ತೋರಿಸುತ್ತಿದೆ. ಉದ್ಯೋಗವಕಾಶ ಕಡಿಮೆ ಆಗಿದ್ದು ಭ್ರಷ್ಟಾಚಾರ ತಾರಕ್ಕಕ್ಕೇರಿದೆ ಎಂದರು. ಈ ನಿಟ್ಟಿನಲ್ಲಿ ಅರ್ ವೈ ಎ ಸಂಘಟನೆ ಬಲಿಷ್ಟಗೊಳಿಸಬೇಕೆಂದು ಅವರು ಕರೆ ನೀಡಿದರು.

ತುಳಸೀದಾಸ್ ಆರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಬದ್ರುದ್ದೀನ್, ಸಿಪಿಐಎಂಎಲ್ ಲಿಬರೇಶನ್ ದ ಕ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ, ನಮ್ಮ ಮತ ನಮ್ಮ ಹಕ್ಕು ಸಂಘಟನೆಯ ಪಾದರ್ ವಿನೋದ್, ಸಿಪಿಐಎಂಎಲ್ ಕೊಡಗು ಜಿಲ್ಲಾ ಕಾರ್ಯದರ್ಶಿ ಮೋಹನ್ ಎಂ ಕೆ, ಎಐಸಿಸಿಟಿಯು ರಾಜ್ಯ ಗೌರವಾಧ್ಯಕ್ಷ ಮೋಹನ್ ಕೆ ಇ, ಅಟೋ ರಿಕ್ಷಾ ಚಾಲಕರ ಸಂಘದ ಜಿಲ್ಲಾದ್ಯಕ್ಷ ಅನ್ಸಾರ್ ಬಜಾಲ್, ಐಸಾ ರಾಜ್ಯ ಮುಖಂಡರಾದ ಸತ್ಯಂ ಪಾಂಡೆ, ಹೇಮಂತ್ ಬೆಂಗಳೂರು, ಲಿಯೋನ್ ಬೆಂಗಳೂರು ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಮಹಮ್ಮದ್ ಲುಕ್ಮಾನ್ ಕೆ ಎಂ ಸ್ವಾಗತಿಸಿ, ಪ್ರಸ್ತಾವನೆಗೈದರು. 

ಇದೇ ವೇಳೆ ನೂತನ ಸಂಚಾಲಕ ಸಮಿತಿ ರಚಿಸಲಾಯಿತು. ಸಂಚಾಲಕರುಗಳಾಗಿ ತುಳಸೀದಾಸ್ ಆರ್, ಚೆನ್ನಯ್ಯ ಬೆಂಗಳೂರು, ಸಹ ಸಂಚಾಲಕರುಗಳಾಗಿ ಮಹಮ್ಮದ್ ಲುಕ್ಮಾನ್ ಕೆ ಎಂ, ಹೇಮಂತ್ ಬೆಂಗಳೂರು, ರಮೇಶ್ ಗಂಗಾವತಿ ಹಾಗೂ ಹನ್ನೆರಡು ಜನ ಸದಸ್ಯರ ಸಮಿತಿ ರಚಿಸಲಾಯಿತು.

  • Blogger Comments
  • Facebook Comments

0 comments:

Post a Comment

Item Reviewed: ಪ್ರಜಪ್ರಭುತ್ವ ವ್ಯವಸ್ಥೆ ಉಳಿಸಿಕೊಳ್ಳಲು ಯುವಜನತೆ ಒಗ್ಗಟ್ಟಾಗಬೇಕು : ಕ್ಲಿಪ್ಟನ್ ಡಿ ರೊಜಾರಿಯೋ Rating: 5 Reviewed By: karavali Times
Scroll to Top