ಬಂಟ್ವಾಳ, ಜೂನ್ 05, 2026 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 24 ರ ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆಯಲ್ಲಿ ಈ ವರ್ಷವೂ ಮೊದಲ ಮಳೆಗೆ ಕೃತಕ ನೆರೆ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಕೃತಕ ನೆರೆಯಿಂದ ಇಲ್ಲಿನ ಮೆಸ್ಕಾಂ ಶಾಖಾ ಕಚೇರಿ, ಮಹಿಳಾ ಹಾಸ್ಟೆಲ್ ಹಾಗೂ ಅಂಗನವಾಡಿ ಕೇಂದ್ರಗಳಿಗೆ ದಿಗ್ಬಂಧನ ವಿಧಿಸಿದಂತಾಗಿದೆ.
ಇಲ್ಲಿನ ಚರಂಡಿ ಅವ್ಯವಸ್ಥೆಯಿಂದಾಗಿ ಈ ಪರಿಸ್ಥಿತಿ ಉಂಟಾಗಿದ್ದು, ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ರಸ್ತೆಯಲ್ಲೇ ನೆರೆ ಪರಿಸ್ಥಿತಿ ಉಂಟಾಗಿದೆ. ಕಳೆದ ಮಳೆಗಾಲ ಪೂರ್ತಿ ಇದೇ ಸಮಸ್ಯೆ ಇದ್ದು, ಮೆಸ್ಕಾಂ ಕಚೇರಿ, ಅಂಗನವಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಹೆಣ್ಣು ಮಕ್ಕಳ ಹಾಸ್ಟೆಲಿಗೆ ಬರುವವರು ಹಾಗೂ ಇಲ್ಲಿನ ಸ್ಥಳೀಯ ನಿವಾಸಿಗಳು ಮತ್ತು ವಾಹನ ಸವಾರರು ಕೃತಕ ನೆರೆಯನ್ನು ದಾಟಿ ಬರಬೇಕಾದ ಪರಿಸ್ಥಿತಿ ಇತ್ತು. ಈ ಬಗ್ಗೆ ಸ್ಥಳೀಯರು ಪುರಸಭೆ ಸಹಿತ ವಿವಿಧ ಇಲಾಖೆಗಳು ಹಾಗೂ ಶಾಸಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಸಾಕಷ್ಟು ದೂರು ನೀಡಿದರೂ ಯಾವುದೇ ಸ್ಪಂದನೆ ಇಲ್ಲದೆ ಇದ್ದ ಪರಿಣಾಮ ಈ ಬಾರಿಯ ಮೊದಲ ಮಳೆಗೇ ಮತ್ತದೇ ಪರಿಸ್ಥಿತಿ ಮುಂದುವರಿದಿದೆ. ಈ ಬಾರಿಯಾದರೂ ಇಲ್ಲಿನ ಕೃತಕ ನೆರೆ ಪರಿಸ್ಥಿತಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.














0 comments:
Post a Comment