ಬಂಟ್ವಾಳ, ಜೂನ್ 11, 2026 (ಕರಾವಳಿ ಟೈಮ್ಸ್) : ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಜಿಬೆಟ್ಟು ಶ್ರೀನಿವಾಸ್ ಗೇರು ಫ್ಯಾಕ್ಟರಿ ಬಳಿ ಜೂನ್ 8 ರಂದು ಸಂಭವಿಸಿದೆ.
ಗಾಯಗೊಂಡ ಬೈಕ್ ಸವಾರನನ್ನು ಅಜ್ವಿನ್ ಪಿಂಟೋ ಎಂದು ಹೆಸರಿಸಲಾಗಿದೆ. ಈ ಬಗ್ಗೆ ಟಿಪ್ಪರ್ ಲಾರಿ ಚಾಲಕ ಅಜ್ಜಿಬೆಟ್ಟು ನಿವಾಸಿ ಧರ್ಣಪ್ಪ ಮೂಲ್ಯ (63) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ಜೂನ್ 8 ರಂದು ಕರಿಮಲೆ ಎನ್ ಎಸ್ ಕ್ರಶರಿನಿಂದ ಪದವು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಹತ್ತಿರ ಇರುವ ಕಲ್ಲಿನ ಕೋರೆಗೆಂದು ಟಿಪ್ಪರ್ ಲಾರಿಯನ್ನು ಚಲಾಯಿಸಿಕೊಂಡು ವಾಮದಪದವು-ನೇರಳಕಟ್ಟೆ ಡಾಮಾರು ರಸ್ತೆಯಲ್ಲಿ ಹೋಗುತ್ತಾ ಮದ್ಯಾಹ್ನ ಸಮಯ 2.15ಕ್ಕೆ ಅಜ್ಜಿಬೆಟ್ಟು ಗ್ರಾಮದ ಶ್ರೀನಿವಾಸ ಗೇರು ಪ್ಯಾಕ್ಟರಿ ಬಳಿಯಲ್ಲಿರುವ ತಿರುವಿನಲ್ಲಿ ತಲುಪಿದಾಗ ಎದುರುಗಡೆಯಿಂದ ಅಂದರೆ ನೇರಳಕಟ್ಟೆ ಕಡೆಯಿಂದ ವಾಮದಪದವು ಕಡೆಗೆ ಅಜ್ವಿನ್ ಪಿಂಟೋ ಚಲಾಯಿಸಿಕೊಂಡು ಬಂದ ಬೈಕ್ ಟಿಪ್ಪರ್ ಲಾರಿಯ ಬಲಭಾಗದ ಹಿಂಬದಿಯ ಚಕ್ರದ ಮಡ್ ಗಾರ್ಡ್‍ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಬೈಕ್ ಸಮೇತ ರಸ್ತೆಗೆ ಬಿದ್ದ ಬೈಕ್ ಸವಾರನ ಕೈ, ಕಾಲಿನ ಪಾದದ ಭಾಗಕ್ಕೆ ಹಾಗೂ ಸೊಂಟಕ್ಕೆ ಗಾಯಗಳಾಗಿದ್ದು, ಅವರನ್ನು ವಾಮದಪದವು ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













0 comments:
Post a Comment