ಬಂಟ್ವಾಳ, ಜೂನ್ 11, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡಿನ ಮಿನಿ ವಿಧಾನಸೌಧದ ಲಿಫ್ಟ್ ಮತ್ತೆ ಕೈಕೊಟ್ಟು ಆತಂಕಕ್ಕೆ ಕಾರಣವಾಗಿದೆ. ಗುರುವಾರ ಇಲ್ಲಿನ ಲಿಫ್ಟಿನಲ್ಲಿ ಇಬ್ಬರು ವ್ಯಕ್ತಿಗಳು ಸಿಲುಕಿ ಸುಮಾರು 45 ನಿಮಿಷಗಳ ಕಾಲ ಒದ್ದಾಟದ ಬಳಿಕ ಕೊನೆಗೂ ಅವರನ್ನು ಸಾರ್ವಜನಿಕರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಇಬ್ಬರೂ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಗುರುವಾರ ಮಧ್ಯಾಹ್ನ ಸುಮಾರು 12.45 ರಿಂದ 1.30 ರ ಮಧ್ಯದ ಅವಧಿಯಲ್ಲಿ ಈ ಅವಾಂತರ ಸಂಭವಿಸಿದೆ. ಕಚೇರಿ ಕೆಲಸಕ್ಕೆ ಬಂದಿದ್ದ ಸಾರ್ವಜನಿಕರಿಬ್ಬರು ಲಿಪ್ಟ್ ಮೂಲಕ ತೆರಳುತ್ತಿದ್ದ ಸಂದರ್ಭ ತಾಂತ್ರಿಕ ವೈಫಲ್ಯದಿಂದಾಗಿ ಲಿಫ್ಟ್ ಕೈಕೊಟ್ಟಿದ್ದು, ಇಬ್ಬರೂ ಲಿಫ್ಟ್ ಒಳಗೆ ಬಾಕಿಯಾಗಿದ್ದಾರೆ. ಬಳಿಕ ಅವರು ಪರಿಚಿತರಿಗೆ ದೂರವಾಣಿ ಕರೆ ಮಾಡಿದ್ದು, ಅವರು ವಿಷಯವನ್ನು ತಹಶಿಲ್ದಾರ್ ಅವರ ಗಮನಕ್ಕೆ ತಂದಿದ್ದಾರೆ.
ಕೊನೆಗೂ ಸುಮಾರು 45 ನಿಮಿಷಗಳ ಕಾಲ ನಡೆಸಿದ ಹೋರಾಟದಿಂದಾಗಿ ಲಿಪ್ಟ್ ಒಳಗೆ ಸಿಲುಕಿಕೊಂಡವರನ್ನು ಸಾರ್ವಜನಿಕರು ರಕ್ಷಿಸಿದ್ದಾರೆ. ಬಿ ಸಿ ರೋಡು ಮಿನಿ ವಿಧಾನಸೌಧದ ಲಿಫ್ಟ್ ಆಗಿಂದಾಗ್ಗೆ ಕೈ ಕೊಡುತ್ತಿದ್ದು, ಗುರುವಾರ ಮಾತ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಾಲೂಕಾಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಇಲ್ಲಿನ ಲಿಫ್ಟ್ ವ್ಯವಸ್ಥೆಗೆ ಕಾಯಕಲ್ಪ ಒದಗಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.














0 comments:
Post a Comment