ಕಳೆದ ಅಕ್ಟೋಬರ್ ಸಂಚಿಕೆಯಲ್ಲಿ ಕರಾವಳಿ ಟೈಮ್ಸ್ ಈ ಬಗ್ಗೆ ಬೆಳಕು ಚೆಲ್ಲಿತ್ತು
ಬೆಂಗಳೂರು, (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸರಕಾರ ಜೂನ್ 3 ರಂದು ಸಂಜೆ ಅಸ್ತಿತ್ವಕ್ಕೆ ಬರುತ್ತಲೇ ಮೊದಲ ಸಂಪುಟ ಸಭೆಯಲ್ಲಿ ಸರಕಾರ ಮಹತ್ವದ ಘೋಷಣೆಯೊಂದನ್ನು ಹೊರಡಿಸಿದೆ. ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಪಾಸ್ ಒದಗಿಸುವ ಭರವಸೆ ನೀಡಿದ್ದಲ್ಲದೆ ಜೂನ್ 12 ರಂದು ಈ ಉಚಿತ ಬಸ್ ಪಾಸ್ ವಿತರಣೆಗೂ ಸರಕಾರ ಕ್ರಮ ಕೈಗೊಂಡಿದೆ. ಈಗಾಗಲೇ ಹಣ ನೀಡಿ ಪಾಸ್ ಪಡೆದುಕೊಂಡಿರುವ ವಿದ್ಯಾರ್ಥಿಗಳಿಗೆ ಹದಿನೈದು ದಿನಗಳಲ್ಲೇ ಪಾವತಿಸಿದ ಪೂರ್ಣ ಮೊತ್ತವನ್ನು ಮರು ಪಾವತಿಸುವುದಾಗಿ ಸರಕಾರ ಭರವಸೆ ನೀಡಿದೆ.
ಕಳೆದ ಸಿದ್ದರಾಮಯ್ಯ ನೇತೃತ್ವದ ಸರಕಾರ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳ ಪೈಕಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆ ಮಹತ್ವದ ಒಂದಾಗಿತ್ತು. ಇದರಿಂದ ರಾಜ್ಯದ ಮಹಿಳೆಯರು ರಾಜ್ಯಾದ್ಯಂತ ಉಚಿತ ಪ್ರಯಾಣ ಬೆಳೆಸಿ ಪ್ರವಾಸ ಕೈಗೊಂಡಿದ್ದಲ್ಲದೆ, ವಿವಿಧ ಧಾರ್ಮಿಕ ಹಾಗೂ ಐತಿಹಾಸಿಕ ಸ್ಥಳಗಳ ವೀಕ್ಷಣೆಗೂ ತೆರಳುವ ಮೂಲಕ ಖುಷಿ ಪಟ್ಟಿದ್ದರು. ಈ ಮಧ್ಯೆ ಈ ಉಚಿತ ಪ್ರಯಾಣದ ಲಾಭ ಪಡೆದುಕೊಂಡಿದ್ದ ರಾಜ್ಯದ ವಿದ್ಯಾರ್ಥಿನಿಯರು ಶಾಲಾ-ಕಾಲೇಜುಗಳಿಗೂ ಈ ಯೋಜನೆಯಿಂದಾಗಿ ಯಾವುದೇ ರಿಯಾಯಿತಿ ದರದ ಪಾಸ್ ಪಡೆಯುವ ಅವಶ್ಯಕತೆ ಇಲ್ಲದೆ ಉಚಿತವಾಗಿಯೇ ಪ್ರಯಾಣಿಸುತ್ತಿದ್ದರು. ಆದರೆ ಈ ಯೋಜನೆಯಿಂದ ಹುಡುಗರು ಮಾತ್ರ ವಂಚಿತರಾಗಿದ್ದು, ಹಣ ಪಾವತಿಸಿ ರಿಯಾಯಿತಿ ಬಸ್ ಪಾಸ್ ಪಡೆದು ಪ್ರಯಾಣಿಸುವ ಅವಶ್ಯಕತೆ ಇತ್ತು.
ಮಹಿಳೆಯರ ಉಚಿತ ಪ್ರಯಾಣದ ನಿಬಿಡತೆಯಿಂದಾಗಿ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಸದಾ ತುಂಬಿಕೊಂಡಿತ್ತು. ಇದರಿಂದ ರಿಯಾಯಿತಿ ದರದಲ್ಲಿ ಪಾಸ್ ಪಡೆದುಕೊಂಡು ಪ್ರಯಾಣಿಸುವ ವಿದ್ಯಾರ್ಥಿಗಳು ಕನಿಷ್ಠ ನಿಂತುಕೊಳ್ಳಲೂ ಜಾಗವಿಲ್ಲದೆ ಬಸ್ ಪಾಸ್ ಪಡೆದೂ ಸರಕಾರಿ ಬಸ್ಸುಗಳಲ್ಲಿ ಸಂಚರಿಸಲಾಗದ ಪರಿಸ್ಥಿತಿಯ ಬಗ್ಗೆ ದೂರಿಕೊಂಡಿದ್ದರು. ಜೊತೆಗೆ ತುಂಬಿದ ಬಸ್ಸಿನಲ್ಲಿ ಪ್ರಯಾಣಿಸುವ ಮಧ್ಯೆ ನಿಗಮದ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಬಸ್ ಪಾಸ್ ಪಡೆಯುವ ಕೌಂಟರ್ ಹಾಗೂ ಹತ್ತುವ, ಇಳಿಯುವ ಪಾಯಿಂಟ್ ನಿರ್ಬಂಧಗಳ ಬಗ್ಗೆಯೂ ವಿದ್ಯಾರ್ಥಿಗಳು ಅನುಭವಿಸುತ್ತಿದ್ದ ಕಿರಿಕಿರಿ ಬಗ್ಗೆ ದೂರಿಕೊಂಡಿದ್ದರು. ಈ ಎಲ್ಲಾ ಕಿರಿ ಕಿರಿ ನಿಯಂತ್ರಿಸುವ ಉದ್ದೇಶಕ್ಕಾಗಿ ವಿದ್ಯಾರ್ಥಿನಿಯರ ಜೊತೆಗೆ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ವಿತರಿಸಿ ಸರಕಾರ ಸೂಕ್ತ ಕ್ರಮ ಕೈಗೊಂಡಿದ್ದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರವಾಗುವ ಜೊತೆಗೆ ವಿದ್ಯಾರ್ಥಿ ಸಮೂಹಕ್ಕೆ ಸರಕಾರ ಪೂರ್ಣ ಪ್ರಮಾಣದಲ್ಲಿ ಸಹಕರಿಸಿದಂತಾಗಲಿದೆ ಎಂಬ ವಿದ್ಯಾರ್ಥಿ ಸಮೂಹದ ಆಗ್ರಹವನ್ನು ಕರಾವಳಿ ಟೈಮ್ಸ್ ಕಳೆದ ಅಕ್ಟೋಬರ್ ತಿಂಗಳ ಸಂಚಿಕೆಯ ಮುಖಪುಟ ವರದಿಯ ಮೂಲಕ ಗಮನ ಸೆಳೆದಿತ್ತು.
ಇದೀಗ ವಿದ್ಯಾರ್ಥಿ ಸಮೂಹದ ಸಮಸ್ಯೆಗಳ ಬಗ್ಗೆ ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮನದಟ್ಟು ಮಾಡಿಕೊಂಡು ತಮ್ಮ ಮೊದಲ ಸಂಪುಟ ಸಭೆಯಲ್ಲೇ ಈ ಬಗ್ಗೆ ಮಹತ್ವದ ಘೋಷಣೆ ಮಾಡಿರುವುದು ವಿದ್ಯಾರ್ಥಿ ಸಮುದಾಯದ ಹರ್ಷಕ್ಕೆ ಕಾರಣವಾಗಿದೆ. ಡಿಕೆ ನೇತೃತ್ವದ ನೂತನ ಸರಕಾರ ಆರಂಭದಲ್ಲೇ ವಿದ್ಯಾರ್ಥಿಸ್ನೇಹಿಯಾಗಿ ಯೋಜನೆ ಘೋಷಣೆ ಮಾಡಿರುವುದಕ್ಕಾಗಿ ರಾಜ್ಯದ ವಿದ್ಯಾರ್ಥಿ ಸಮೂಹ ಹಾಗೂ ವಿದ್ಯಾರ್ಥಿ ಸಂಘಟನೆಗಳು ಸರಕಾರದ ವಿದ್ಯಾರ್ಥಿಪರ ಕಾಳಜಿಗೆ ಅಭಿನಂದನೆ ಸಲ್ಲಿಸಿದೆ. ಶೈಕ್ಷಣಿಕ ಆರಂಭವಾಗಿರುವ ಹಿನ್ನಲೆಯಲ್ಲಿ ಸರಕಾರ ಈ ಬಗ್ಗೆ ತಕ್ಷಣ ಉಚಿತ ಪಾಸ್ ವಿತರಣೆಗೆ ಸರಳ ಕ್ರಮ ಕೈಗೊಂಡು ವಿದ್ಯಾರ್ಥಿಗಳ ಪಾಲಿಗೆ ಪ್ರಯಾಣಭಾಗ್ಯಕ್ಕೆ ಅನುವು ಮಾಡಿಕೊಡುವಂತೆ ಆಗ್ರಹಿಸಿದ್ದಾರೆ.
ಮಹಿಳೆಯರಿಗೂ ಪಾಸ್ ವಿತರಣೆಗೆ ಕ್ರಮ ಕೈಗೊಳ್ಳಬೇಕು
ಸರಕಾರದ ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಮಹಿಳೆಯರು ಆಧಾರ್ ಹಾಗೂ ಇನ್ನಿತರ ವಿಳಾಸ ಪುರಾವೆ ಜೊತೆ ಸರಕಾರಿ ಬಸ್ಸುಗಳಲ್ಲಿ ಪ್ರಯಾಣಿಸುವ ವೇಳೆ ಕೆಲವೊಮ್ಮೆ ಗೊಂದಲಗಳು ಉಂಟಾಗುತ್ತಿರುವುದು ಕಂಡು ಬರುತ್ತಿದ್ದು, ಈ ಸಮಸ್ಯೆ ಪರಿಹಾರದ ಹಿನ್ನಲೆಯಲ್ಲಿ ಸರಕಾರ ಶಕ್ತಿ ಯೋಜನೆ ಬಳಸುವ ಮಹಿಳೆಯರಿಗೆ ಶೀಘ್ರವಾಗಿ ಅದಕ್ಕೂ ಪಾಸ್ ವ್ಯವಸ್ಥೆಯನ್ನು ಜಾರಿಗೊಳಿಸಿ ವಿತರಿಸುವಂತೆ ಮಹಿಳೆಯರು ಆಗ್ರಹಿಸಿದ್ದಾರೆ.













0 comments:
Post a Comment