ಬಂಟ್ವಾಳ, ಜೂನ್ 14, 2026 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪ್ರಮುಖ ಪಟ್ಟಣವಾಗಿರುವ ಬಿ ಸಿ ರೋಡಿನಲ್ಲಿ ಜನರ ನಿತ್ಯ ಓಡಾಟಕ್ಕೆ ಮಾರಕವಾಗಿರುವ ಹಾಗೂ ಅಪಘಾತ, ಅಪಾಯಕ್ಕೆ ಮುಕ್ತ ಆಹ್ವಾನ ನೀಡುವ ಹಲವು ಪ್ರಮುಖ ಸಮಸ್ಯೆಗಳಿದ್ದರೂ ಅದ್ಯಾವುದರ ಬಗ್ಗೆಯೂ ಸ್ಥಳೀಯಾಡಳಿತವಾಗಲೀ, ತಾಲೂಕಾಡಳಿತವಾಗಲೀ, ಟ್ರಾಫಿಕ್ ಪೊಲೀಸ್ ಸಹಿತ ವಿವಿಧ ಇಲಾಖೆಗಳಾಗಲೀ ಯಾವುದೂ ಈ ಬಗ್ಗೆ ಪರಿಹಾರಕ್ಕೆ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಇಲ್ಲಿನ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿರುವ ಮಧ್ಯೆಯೇ ಬಿ ಸಿ ರೋಡು ಹೃದಯ ಭಾಗದಲ್ಲಿ ಜನ ಮಳೆ-ಬಿಸಿಲಿನಿಂದ ರಕ್ಷಣೆ ಪಡೆಯುತ್ತಿದ್ದ ಬಸ್ ಶೆಲ್ಟರ್‍ವೊಂದು ರಾತೋರಾತ್ರಿ ತೆರವುಗೊಂಡಿರುವ ಬಗ್ಗೆ ಜನ ಸಂಶಯದ ಮಾತುಗಳನ್ನಾಡುತ್ತಿರುವುದು ಕೇಳಿ ಬರುತ್ತಿದೆ.
ಬಿ ಸಿ ರೋಡು ಮುಖ್ಯ ವೃತ್ತದ ಬಳಿ ಬೃಹತ್ ಗಾತ್ರದ ಸರ್ಕಲ್‍ವೊಂದು ನಿರ್ಮಾಣವಾಗುತ್ತಿದ್ದು, ಇದು ಹಲವು ಅಪಾಯಗಳಿಗೆ, ಅಪಘಾತಗಳಿಗೆ ಕಾರಣವಾಗಿದೆ. ಇಲ್ಲಿನ ಅವೈಜ್ಞಾನಿಕ ವೃತ್ತ ನಿರ್ಮಾಣದಿಂದಾಗಿ ಈಗಾಗಲೇ ಪ್ರಾಣ ಬಲಿಯಂತಹ ಗಂಭೀರ ಅಪಾಯಗಳು ಸಂಭವಿಸಿ ರಾಜ್ಯದ ಗಮನ ಸೆಳೆದಿದ್ದರೂ ಈ ವೃತ್ತ ನಿರ್ಮಾಣದ ಬಗ್ಗೆ ವೈಜ್ಞಾನಿಕತೆ ಪಾಲಿಸುವ ಕನಿಷ್ಠ ಪ್ರಯತ್ನವೂ ಸಾಗಿರುವುದು ಕಂಡು ಬಂದಿಲ್ಲ. ಗಂಭೀರ ಅಪಘಾತ ಸಂಭವಿಸಿ ನಾಲ್ಕು ಜೀವಗಳನ್ನು ಬಲಿ ಪಡೆದ ಬಳಿಕ ಮಾಧ್ಯಮಗಳು ವ್ಯಾಪಕ ಬೆಳಕು ಚೆಲ್ಲಿದ ಪರಿಣಾಮ ಈ ವೃತ್ತದ ಬಳಿ ಕೆಲವೊಂದು ಸೂಚನಾ ಫಲಕಗಳು, ಮಾರ್ಕ್‍ಗಳನ್ನು ಅಳವಡಿಸುವ ಕೆಲಸ ನಡೆದಿರುವುದು ಬಿಟ್ಟರೆ ಯಾವುದೇ ಗಂಭೀರ ಕ್ರಮಗಳು ಜರುಗಿಲ್ಲ. ಇದೀಗ ಮತ್ತೆ ಈ ವೃತ್ತದ ಒಳಭಾಗದಲ್ಲಿ ಕಾಮಗಾರಿ ಆರಂಭವಾಗಿದೆಯಲ್ಲದೆ ಹೆದ್ದಾರಿಗಿಂತ ಎಷ್ಟೋ ಪಾಲು ಅಗಲವಾಗಿ ಅಪಾಯಕಾರಿಯಾಗಿರುವ ವೃತ್ತದ ವೈಜ್ಞಾನಿಕತೆ ಬಗ್ಗೆ ಕ್ರಮ ಅನುಸರಿಸುವ ಪ್ರಯತ್ನ ನಡೆಯುತ್ತಿಲ್ಲ.
ಈ ಅವೈಜ್ಞಾನಿಕ ವೃತ್ತ ಸಹಿತ ಬಿ ಸಿ ರೋಡು ಪೇಟೆಯಲ್ಲಿ ಜನರಿಗೆ ಪೂರಕವಾಗಿ ಕೈಗೊಳ್ಳಬೇಕಾದ ಹಲವು ಕ್ರಮಗಳಿದ್ದರೂ ಅದ್ಯಾವುದೂ ಜಾರಿಗೆ ಬರದೆ ಪೇಟೆಯಲ್ಲಿ ವಿವಿಧ ಊರಿಗೆ ತೆರಳುವ ಸಾರ್ವಜನಿಕರು ಬಿಸಿಲು-ಮಳೆಗೆ ರಕ್ಷಣೆ ಪಡೆಯುತ್ತಿದ್ದ ಬಸ್ ಶೆಲ್ಟರ್‍ವೊಂದು ಮಾತ್ರ ರಾತೋರಾತ್ರಿ ಧರಾಶಾಹಿಯಾಗಿದೆ. ಇದರ ಹಿನ್ನಲೆ, ಕಾರಣಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಕಾರಣವಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಪುರಸಭಾ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಂಡು ನಿರ್ಮಾಣಗೊಂಡಿದ್ದ ಇಲ್ಲಿನ ಪ್ರಯಾಣಿಕರ ತಂಗುದಾಣವನ್ನು ಅದೇ ಕೌನ್ಸಿಲ್ ಮತ್ತೆ ನಿರ್ಣಯ ಕೈಗೊಂಡು ತೆರವಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಜನರಿಗೆ ಅನುಕೂಲವಾಗಿದ್ದ ವ್ಯವಸ್ಥೆಯೊಂದರ ತೆರವುಗೊಳಿಸುವ ಸಂದರ್ಭ ಪರ್ಯಾಯ ಕ್ರಮ ಕೈಗೊಳ್ಳಬೇಕು ಎಂಬ ಕನಿಷ್ಠ ಜ್ಞಾನವೂ ಸ್ಥಳೀಯಾಡಳಿತಕ್ಕಾಗಲೀ, ಅಧಿಕಾರಿ ವರ್ಗಕ್ಕಾಗಲೀ ಇಲ್ಲದೆ ಹೋಗಿರುವುದೇ ಇದೀಗ ಜನರ ಮಧ್ಯೆ ಚರ್ಚೆಗೀಡಾಗಿರುವ ವಿಷಯ.
ಅಲ್ಲದೆ ಬಿ ಸಿ ರೋಡು ಪೇಟೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಗಳೇ ಇಲ್ಲದ ಕೆಲವು ಕಟ್ಟಗಳಿದ್ದು, ಇಂತಹ ಕಟ್ಟಡಗಳಲ್ಲಿನ ವ್ಯಾಪಾರ-ವಹಿವಾಟು ಕೇಂದ್ರಗಳಿಗೆ ಬರುವ ಜನ ಪಾರ್ಕಿಂಗಿಗಾಗಿ ಹೆದ್ದಾರಿಯ ರಸ್ತೆಯನ್ನೋ, ರಸ್ತೆ ಬದಿಗಳನ್ನೋ ಆಶ್ರಯಿಸಬೇಕಾಗಿದೆ. ಇದೂ ಕೂಡಾ ಪೇಟೆಯ ಟ್ರಾಫಿಕ್ ಕಿರಿಕಿರಿಗೆ ಕಾರಣವಾಗುತ್ತಿರುವುದು ಸುಳ್ಳಲ್ಲ. ಈ ಬಗ್ಗೆಯೂ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಆಗ್ರಹ ಕೇಳಿ ಬರುತ್ತಿದೆ.
ಇಡೀ ಬಿ ಸಿ ರೋಡು ಪೇಟೆಯಲ್ಲಿ ಪ್ರಯಾಣಿಕರಿಗೆ ನಿಂತುಕೊಳ್ಳಲು ಪೂರಕ ವ್ಯವಸ್ಥೆಯಾಗಲೀ, ಖಾಸಗಿ ವಾಹನಗಳ ನಿಲುಗಡೆಗೆ ಪೂರಕ ಪೇ ಪಾರ್ಕಿಂಗ್ ಆಗಲೀ, ಇಲ್ಲಿನ ಟ್ರಾಫಿಕ್ ನಿಯಂತ್ರಣಕ್ಕೆ ಬೇಕಾದ ಪೂರಕ ವ್ಯವಸ್ಥೆಗಳಾಗಲೀ ಇಲ್ಲಿನ ಸ್ಥಳೀಯಾಡಳಿತ, ತಾಲೂಕಾಡಳಿತ, ಶಾಸಕರು, ಟ್ರಾಫಿಕ್ ಪೊಲೀಸ್ ಇಲಾಖೆ ಸಹಿತ ಯಾರಿಂದಲೂ ಇನ್ನೂ ಕೂಡಾ ನಿರ್ಮಾಣ ಆಗುತ್ತಲೇ ಇಲ್ಲ. ಬದಲಾಗಿ ಇದ್ದ ಅಲ್ಪಸ್ವಲ್ಪ ಅನುಕೂಲತೆಗಳನ್ನೇ ಯಾವುದೋ ರಾಜಕೀಯ ಒತ್ತಡ ಅಥವಾ ಲಾಬಿ ಕಾರಣಗಳಿಗಾಗಿ ತೆರವುಗೊಳಿಸುವ ಮೂಲಕ ಜನರನ್ನು ಇನ್ನಷ್ಟು ಒತ್ತಡ, ಅಪಾಯಕ್ಕೆ ತಳ್ಳುವ ಸನ್ನಿವೇಶ ಕಂಡು ಬರುತ್ತಿದ್ದು, ಈ ಬಗ್ಗೆ ಜನಾಕ್ರೋಶ ಸ್ಫೋಟಗೊಳ್ಳುವ ಮುನ್ನ ಇಲ್ಲಿನ ಸಮಸ್ಯೆಗಳ ಬಗ್ಗೆ ಸ್ವತಃ ಜಿಲ್ಲಾಡಳಿತ ಗಮನ ಹರಿಸಿ ಸೂಕ್ತ ಪರಿಹಾರ ಕಲ್ಪಿಸುವಂತೆ ಪುರವಾಸಿಗಳು ಆಗ್ರಹಿಸಿದ್ದಾರೆ.



















0 comments:
Post a Comment