ಮಂಗಳೂರು, ಜುಲೈ 10, 2026 (ಕರಾವಳಿ ಟೈಮ್ಸ್) : ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಯ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲವು ಬಾಂಗ್ಲಾದೇಶದ ಪ್ರಜೆಗಳು ಇರುವ ಬಗ್ಗೆ ಖಚಿತ ಮಾಹಿತಿಯಂತೆ ಸುರತ್ಕಲ್ ಠಾಣಾ ಪೊಲೀಸರು ಜುಲೈ 9 ರಂದು ದಾಳಿ ನಡೆಸಿ ಪರಿಶೀಲಿಸಿದ ಸಮಯ ಒಟ್ಟು 54 ಮಂದಿ ಕಟ್ಟಡ ಕಾರ್ಮಿಕರ ದಾಖಲಾತಿಗಳನ್ನು ಪರಿಶೀಲಿಸಿದ ವೇಳೆ ಅಕ್ರಮವಾಗಿ ವಾಸ್ತವ್ಯವಿದ್ದ ಬಾಂಗ್ಲಾದೇಶದ 8 ಮಂದಿ ಪ್ರಜೆಗಳನ್ನು ಪತ್ತೆ ಹಚ್ಚಲಾಗಿದೆ.
ಬಾಂಗ್ಲಾ ಪ್ರಜೆಗಳನ್ನು ಮೊಹಮ್ಮದ್ ಮುಕ್ತಾರ್ ಅಲಿ (36), ಮೊಹಮ್ಮದ್ ರಕೀಬುರ್ ಹೊಸೈನ್ (44), ಮೊಹಮ್ಮದ್ ಅಜರುಲ್ ಇಸ್ಲಾಂ (36), ಮೊಹಮ್ಮದ್ ಝಾಹಿದ್ ಹೊಸೈನ್ (18), ಮೊಹಮ್ಮದ್ ಬಿಲಾಲ್ ಹೊಸೈನ್ (36), ಮೊಹಮ್ಮದ್ ಹಸೀಬುಲ್ ಹಸನ್ ಶಾಂಟೋ (37), ಮೊಹಮ್ಮದ್ ಸಮೀವುಲ್ ಹಸನ್ (23) ಹಾಗೂ ಮೊಹಮ್ಮದ್ ಸೈಬುರ್ ರಹ್ಮಾನ್ ಎಂದು ಹೆಸರಿಸಲಾಗಿದೆ.
ಈ ಎಲ್ಲಾ ಬಾಂಗ್ಲಾದೇಶದ ಪ್ರಜೆಗಳು ಸುಮಾರು 3 ತಿಂಗಳ ಹಿಂದೆ ಅಕ್ರಮವಾಗಿ ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮೂಲಕ ಭಾರತಕ್ಕೆ ಬಂದು ನಂತರ ಮುರ್ಷಿದಾಬಾದಿನ ಪಶ್ಚಿಮ ಬಂಗಾಳದ ವಿಳಾಸವಿರುವ ಆಧಾರ್ ಕಾರ್ಡ್ ಗಳಿಗೆ ಮೇಲ್ಕಂಡ ಬಾಂಗ್ಲಾದೇಶ ನಿವಾಸಿಗಳ ಭಾವಚಿತ್ರವನ್ನು ಅಂಟಿಸಿ ಕಲರ್ ಜೆರಾಕ್ಸ್ ಮಾಡಿ 2 ತಿಂಗಳಿನಿಂದ ಮುಕ್ಕ ಬಂದು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವುದಾಗಿ ತಿಳಿದುಬಂದಿದೆ.
ಸದ್ರಿ ಬಾಂಗ್ಲಾ ಪ್ರಜೆಗಳನ್ನು ಠಾಣೆಗೆ ಕರೆತಂದು ಕೂಲಂಕಷವಾಗಿ ಪರಿಶೀಲನೆ ಮಾಡಿ ಅವರ ಗುರುತಿನ ಚೀಟಿಯಾದ ನ್ಯಾಷನಲ್ ಐಡಿ ಕಾರ್ಡ್, ಜನನ ಪ್ರಮಾಣ ಪತ್ರ ಹಾಗೂ ಅವರ ಕುಟುಂಬದವರ ದಾಖಲಾತಿಗಳನ್ನು ಪರಿಶೀಲಿಸಿದಾಗ ಇವರು ಬಾಂಗ್ಲಾದೇಶ ನಿವಾಸಿಗಳೆಂದು ದೃಢಪಟ್ಟಿರುತ್ತದೆ. ಮತ್ತು ಅವರುಗಳು ಇಲ್ಲಿಗೆ ಕೂಲಿ ಕೆಲಸವನ್ನು ಮಾಡಲು ಬಂದಿರುವುದಾಗಿ ತಿಳಿದುಬಂದಿದೆ. ಸದ್ರಿ ಬಾಂಗ್ಲಾದೇಶ ನಿವಾಸಿಗಳು ಯಾವುದೇ ರಹದಾರಿ ಪತ್ರ, ವೀಸಾ ಪಡೆಯದೇ ಅಕ್ರಮವಾಗಿ ಭಾರತದ ಗಡಿಯನ್ನು ದಾಟಿ ನುಸುಳಿ ಬಂದಿರುವುದಾಗಿದೆ. ಅಕ್ರಮವಾಗಿ ನುಸುಳಿ ಭಾರತ ದೇಶವನ್ನು ಪ್ರವೇಶಿಸಿದ ಮೇಲ್ಕಾಣಿಸಿದ ಬಾಂಗ್ಲಾದೇಶದ ಪ್ರಜೆಗಳನ್ನು ಮುಂದಿನ ಕ್ರಮದ ಬಗ್ಗೆ ವಿದೇಶಿಯರ ಪ್ರಾದೇಶಿಕ ನೊಂದಣಿ ಕಛೇರಿ ಬೆಂಗಳೂರು ಇಲ್ಲಿಗೆ ವರದಿಯನ್ನು ಪೊಲೀಸರು ನಿವೇದಿಸಿದ್ದಾರೆ.
ಅಕ್ರಮವಾಗಿ ನುಸುಳಿ ಭಾರತ ದೇಶವನ್ನು ಪ್ರವೇಶಿಸಿದ ಮೇಲ್ಕಾಣಿಸಿದ ಬಾಂಗ್ಲಾದೇಶದ ಪ್ರಜೆಗಳನ್ನು ಪತ್ತೆ ಮಾಡುವಲ್ಲಿ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಅವರ ನೇತ್ರತ್ವದಲ್ಲಿ, ಸುರತ್ಕಲ್ ಪೊಲೀಸ್ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್, ಪಿಎಸ್ಸೈ ರಘು ನಾಯಕ, ಠಾಣಾ ಸಿಬ್ಬಂದಿಗಳಾದ ಎಎಸ್ಸೈ ರಾಜೇಶ್ ಆಳ್ವ, ತಿರುಪತಿ ಅಳ್ಳೊಳ್ಳಿ, ಉಮೇಶ್, ರಾಜೇಂದ್ರ ಪ್ರಸಾದ್, ಕಾರ್ತಿಕ್, ವಿನೋದ್ ಕುಮಾರ್, ಸತೀಶ್ ಸತ್ತಿಗೇರಿ, ಸಂತೋಷ್ ಮತ್ತು ಓಂಪ್ರಕಾಶ್ ಬಿಂಗಿ ಅವರು ಭಾಗವಹಿಸಿದ್ದಾರೆ.















0 comments:
Post a Comment