ಬಂಟ್ವಾಳ, ಜುಲೈ 11, 2026 (ಕರಾವಳಿ ಟೈಮ್ಸ್) : ಬಂಟ್ವಾಳ ರೈಲು ನಿಲ್ದಾಣ 26.18 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ಅಭಿವೃದ್ಧಿಗೊಂಡಿದ್ದು, ಎಲ್ಲ ರೀತಿಯಲ್ಲೂ ಅತ್ಯಾಧುನಿಕ ಹಾಗೂ ಸುಸಜ್ಜಿತ ರೀತಿಯಲ್ಲಿ ನಡೆದಿದೆ. ನೂತನವಾಗಿ ಪುನರ್ ನಿರ್ಮಾಣಗೊಂಡ ಬಂಟ್ವಾಳ ರೈಲ್ವೆ ನಿಲ್ದಾಣ ಜುಲೈ 17 ರಂದು ಉದ್ಘಾಟನೆಗೊಳ್ಳಲಿದೆ ಎಂದು ರೈಲ್ವೆ ಮೈಸೂರು ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ.
ಶನಿವಾರ ಸಂಜೆ ಇಲ್ಲಿನ ರೈಲ್ವೆ ನಿಲ್ದಾಣದ ಪುನರ್ ನಿರ್ಮಾಣದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಇಲ್ಲಿನ ರೈಲ್ವೆ ನಿಲ್ದಾಣ ಪುನರ್ ನಿರ್ಮಾಣದ ಮುಖ್ಯ ಉದ್ದೇಶ ಪ್ರಯಾಣಿಕರ ಸೌಲಭ್ಯಗಳನ್ನು ಸುಧಾರಿಸುವುದು, ನಿಲ್ದಾಣದ ಮೂಲ ಸೌಕರ್ಯವನ್ನು ಆಧುನೀಕರಣಗೊಳಿಸುವುದು ಹಾಗೂ ಒಟ್ಟಾರೆ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದಾಗಿದೆ ಎಂದರು.
ಈ ಯೋಜನೆ ಭಾರತೀಯ ರೈಲ್ವೆಯ ಮಾನದಂಡಗಳಿಗೆ ಅನುಗುಣವಾಗಿ ಪ್ರಯಾಣಿಕ ಸೌಲಭ್ಯಗಳ ನವೀಕರಣ, ಸಂಚಾರ ವ್ಯವಸ್ಥೆಯ ಸುಧಾರಣೆ ಮತ್ತು ಸೌಂದರ್ಯವರ್ಧನೆಗೆ ಒತ್ತು ನೀಡುತ್ತದೆ ಎಂದ ಅವರು, ಈ ಯೋಜನೆಯ ಪ್ರಮುಖ ಭಾಗವಾಗಿ, ನಿರೀಕ್ಷಣಾ ಮಂದಿರಗಳು ಮತ್ತು ಟಿಕೆಟ್ ಬುಕ್ಕಿಂಗ್ ಕೌಂಟರುಗಳ ಸುಧಾರಣೆ ಕೈಗೊಳ್ಳಲಾಗಿದೆ. ಹೆಚ್ಚಿನ ಸ್ಥಳ, ಉತ್ತಮ ಕುಳಿತುಕೊಳ್ಳುವ ವ್ಯವಸ್ಥೆ ಮತ್ತು ಪ್ರಯಾಣಿಕರಿಗೆ ಹೆಚ್ಚುವರಿ ಅನುಕೂಲತೆಗಳನ್ನು ಒದಗಿಸಲಾಗಿದೆ. ನಿಲ್ದಾಣದ ವಿನ್ಯಾಸವನ್ನು ಸುಧಾರಿಸಲು ಸುತ್ತಾಟ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿದ್ದು, ವಾಹನಗಳ ಸಂಚಾರವನ್ನು ಸರಳಗೊಳಿಸಲು ಡ್ರಾಪ್-ಆಫ್ ಮತ್ತು ಪಿಕ್-ಅಪ್ ಪ್ರದೇಶಗಳನ್ನು ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ. ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗಿದ್ದು, ಸುರಕ್ಷತೆ ಹೆಚ್ಚಾಗಿದೆ ಎಂದರು.
ಪ್ಲಾಟ್ ಫಾರ್ಮ್ ಮೂಲ ಸೌಕರ್ಯವನ್ನು ಬಲಪಡಿಸಲು ಪೂರ್ಣ ಉದ್ದದ ಪ್ಲಾಟ್ ಫಾರ್ಮ್ ಶೆಲ್ಟರುಗಳನ್ನು ಒದಗಿಸಲಾಗಿದೆ, ಇದರಿಂದ ಎಲ್ಲ ಹವಾಮಾನ ಪರಿಸ್ಥಿತಿಗಳಲ್ಲಿಯೂ ಪ್ರಯಾಣಿಕರಿಗೆ ರಕ್ಷಣೆ ಸಿಗುತ್ತದೆ. ಜೊತೆಗೆ, ನಿಲ್ದಾಣ ಕಟ್ಟಡದ ಮುಂಭಾಗದಲ್ಲಿನ ಪ್ಲಾಟ್ ಫಾರ್ಮ್ ಮೇಲ್ಮೈ ಸುಧಾರಣೆ ಮಾಡಲಾಗಿದ್ದು, ಸುರಕ್ಷತೆ, ದೀರ್ಘಾವಧಿ ಬಳಕೆ ಮತ್ತು ಸುಲಭ ಸಂಚಾರಕ್ಕೆ ಅನುಕೂಲವಾಗಿದೆ ಎಂದ ಅವರು, ಯೋಜನೆಯ ಭಾಗವಾಗಿ, ನಿಲ್ದಾಣದ ಒಳಾಂಗಣ ಸುಧಾರಣೆ, ಆಧುನಿಕ ಫರ್ನಿಚರ್, ಬೆಳಕು ವ್ಯವಸ್ಥೆ ಮತ್ತು ಲ್ಯಾಂಡ್ ಸ್ಕೇಪಿಂಗ್ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇದರೊಂದಿಗೆ ನಿಲ್ದಾಣವು ಹೆಚ್ಚು ಆರಾಮದಾಯಕ ಹಾಗೂ ಆಕರ್ಷಕ ವಾತಾವರಣವನ್ನು ಹೊಂದಿದೆ. ಪ್ರವೇಶ/ ನಿರ್ಗಮನ ಕಮಾನುಗಳು ನಿರ್ಮಿಸುವ ಮೂಲಕ ನಿಲ್ದಾಣದ ವಾಸ್ತು ಶೈಲಿಯನ್ನು ಸುಧಾರಿಸಲಾಗಿದ್ದು, ವಿಶಿಷ್ಟ ಹಾಗೂ ಸ್ವಾಗತಾರ್ಹ ರೂಪ ನೀಡಲಾಗಿದೆ ಎಂದರು.
ವಿದ್ಯುತ್ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳನ್ನು ಮಾಡಲಾಗಿದೆ. ಉನ್ನತ ಮಟ್ಟದ ಬೆಳಕು ವ್ಯವಸ್ಥೆ, ಎಲ್ ಇ ಡಿ ಪ್ಲಾಟ್ ಫಾರ್ಮ್ ಹೆಸರು ಫಲಕಗಳು, ಎಲ್ ಇ ಡಿ ಸೈನ್ ಬೋರ್ಡುಗಳು ಮತ್ತು ಫಸಾಡ್ ಲೈಟಿಂಗ್ ಅಳವಡಿಸಲಾಗಿದೆ, ಇದರಿಂದ ದೃಶ್ಯತೆ ಹೆಚ್ಚುವುದರ ಜೊತೆಗೆ ವಿದ್ಯುತ್ ಉಳಿತಾಯವೂ ಸಾಧ್ಯವಾಗಿದೆ. ಪ್ರಯಾಣಿಕರ ಮಾಹಿತಿಗಾಗಿ ಕೋಚ್ ಇಂಡಿಕೇಷನ್ ಬೋರ್ಡ್‍ಗಳು, ರೈಲು ಇಂಡಿಕೇಷನ್ ಬೋರ್ಡ್‍ಗಳು, ಸಾರ್ವಜನಿಕ ಘೋಷಣೆ ವ್ಯವಸ್ಥೆ ಮತ್ತು ಗಡಿಯಾರಗಳು ಒದಗಿಸಲಾಗಿದೆ ಎಂದ ಅವರು, ಒಟ್ಟಾರೆ ಬಂಟ್ವಾಳ ರೈಲು ನಿಲ್ದಾಣದ ಪುನರ್ ಅಭಿವೃದ್ಧಿ ಯೋಜನೆಯು ಪ್ರಯಾಣಿಕರ ಆರಾಮ, ಸಂಚಾರ ವ್ಯವಸ್ಥೆಯ ಸುಧಾರಣೆ ಮತ್ತು ಮೂಲ ಸೌಕರ್ಯ ನವೀಕರಣದ ಮೇಲೆ ಕೇಂದ್ರೀಕರಿಸಿ, ನಿಲ್ದಾಣವನ್ನು ಆಧುನಿಕ, ಪರಿಣಾಮಕಾರಿ ಮತ್ತು ಪ್ರಯಾಣಿಕ ಸ್ನೇಹಿ ಕೇಂದ್ರವಾಗಿ ಪರಿವರ್ತಿಸುತ್ತದೆ ಎಂದವರು ಮಾಹಿತಿ ನೀಡಿದರು. ಈ ಸಂದರ್ಭ ನೈರುತ್ಯ ರೈಲ್ವೆ ಮೈಸೂರು ವಿಭಾಗದ ಹಿರಿಯ ಪ್ರಚಾರ ನಿರೀಕ್ಷಕ ಎಚ್ ಶಿವಕುಮಾರ್ ಹಾಗೂ ಮನು ಎಚ್ ಆರ್ ಜೊತೆಗಿದ್ದರು.






















0 comments:
Post a Comment