ಬಂಟ್ವಾಳ, ಜುಲೈ 25 2026 (ಕರಾವಳಿ ಟೈಮ್ಸ್) : ಬರಿಮಾರಿನಲ್ಲಿ ಜುಲೈ 22 ರಂದು ಮರ ದುರಂತಕ್ಕೀಡಾದ ಶಾಲಾ ವಾಹನದ ದಾಖಲೆ ಪತ್ರ ಸರಿ ಇಲ್ಲದ ಕಾರಣಕ್ಕಾಗಿ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಆಡಳಿತ ಮಂಡಳಿ ಮುಖ್ಯಸ್ಥರ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 22 ರಂದು ಸಂಜೆ ಬರಿಮಾರ್ ಎಂಬಲ್ಲಿ ಶಾಲಾ ವಾಹನದ ಮೇಲೆ ಮರ ಬಿದ್ದು ವಾಹನದಲ್ಲಿದ್ದ ಮಗುವೊಂದು ಮೃತಪಟ್ಟು ಇತರ ಕೆಲವು ಮಕ್ಕಳಿಗೆ ಗಾಯಗಳಾಗಿತ್ತು. ಈ ಬಗ್ಗೆ ತನಿಖೆ ಮುಂದುವರೆಸಿದ ಪೊಲೀಸರು ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಂದ ಸದ್ರಿ ಶಾಲಾ ವಾಹನದ ದಾಖಲೆ ಪತ್ರಗಳ ಮಾನ್ಯತೆಯ ಬಗ್ಗೆ ವರದಿ ಪಡೆದಿದ್ದರು. ಘಟನಾ ಸಮಯದಲ್ಲಿ ವಾಹನದ ವಿಮಾ ಪತ್ರ ಹಾಗೂ ಅರ್ಹತಾ ಪತ್ರ ಚಾಲ್ತಿಯಲ್ಲಿ ಇಲ್ಲದೆ ಇರುವುದು ದೃಢಪಟ್ಟಿದೆ. ಅಲ್ಲದೆ ಸದ್ರಿ ವಾಹನವನ್ನು ಶ್ರೀರಾಮ ವಿದ್ಯಾ ಕೇಂದ್ರದ ಹೆಸರಿನಲ್ಲಿ ನೊಂದಾಯಿಸದೇ, ಬೇರೆ ಟ್ರಸ್ಟ್ ವೊಂದರ ಮಾಲಕತ್ವದಲ್ಲಿರುವುದಾಗಿದೆ. ಅಗತ್ಯ ದಾಖಲೆ ಪತ್ರಗಳನ್ನು ಹೊಂದದೇ ವಿದ್ಯಾರ್ಥಿಗಳ ಸುರಕ್ಷತೆಗೆ ಅಪಾಯವನ್ನುಂಟು ಮಾಡುವಂತಹ ವಾಹನವನ್ನು ಸಾರ್ವಜನಿಕ ಸ್ಥಳದಲ್ಲಿ ಬೇಜವಾಬ್ದಾರಿಯಿಂದ ಚಲಾಯಿಸಲು ಕಾರಣರಾದ ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕದ ಆಡಳಿತ ಮಂಡಳಿ ಮುಖ್ಯಸ್ಥರು ಹಾಗೂ ಇತರರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 109/2026, ಕಲಂ 125 ಬಿ ಎನ್ ಎಸ್, ಕಲಂ 196, 192(1) ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.











0 comments:
Post a Comment