ಸುದೀರ್ಘ ಪತ್ರ ಬರೆದು ನಗೆಪಾಟಲಿಗೀಡಾಗಿರುವ ಶಿಕ್ಷಣ ಸಚಿವ : ಹರಿಪ್ರಸಾದ್ ಕಿಡಿ
ನವದೆಹಲಿ, ಜುಲೈ 25, 2026 (ಕರಾವಳಿ ಟೈಮ್ಸ್) : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ನಡೆಯುತ್ತಿದ್ದ ರಾಷ್ಟ್ರವ್ಯಾಪಿ ಪ್ರತಿಭಟನೆ ಇದೀಗ ಕ್ಲೈಮಾಕ್ಸ್ ಹಂತಕ್ಕೆ ತಲುಪಿದ್ದು, ಜುಲೈ 25 ರ ಮಧ್ಯಾಹ್ನ 3 ಗಂಟೆಗೆ ಸಿಜೆಪಿ ಹಾಗೂ ಕೇಂದ್ರ ಸರಕಾರದ ನಡುವೆ ಮಹತ್ವದ ಮಾತುಕತೆ ನಿಗದಿಯಾಗಿರುವ ಮಧ್ಯೆ ಅದಕ್ಕೂ ಮುನ್ನ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ರಾಜೀನಾಮೆ ಘೋಷಿಸಿ ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘ ಪತ್ರ ಹಂಚಿಕೊಂಡಿದ್ದಾರೆ.
ಕೊನೆಗೂ ವಿದ್ಯಾರ್ಥಿಗಳ ಸುದೀರ್ಘ ಹೋರಾಟಕ್ಕೆ ಕೇಂದ್ರ ಸರಕಾರ ಮಂಡಿಯೂರಿದೆ. ವಿದ್ಯಾರ್ಥಿಗಳು ಹಲವು ದಿನಗಳಿಂದ ದೆಹಲಿಯ ಜಂತರ್ ಮಂತರ್ ನಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಂಡಿದ್ದರೂ ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸಿದ್ದ ಕೇಂದ್ರ ಸರಕಾರ ವಿದ್ಯಾರ್ಥಿಗಳ ಬೇಡಿಕೆ ಕೇಳುವ ಬದಲಿಗೆ ಪೊಲೀಸ್ ಬಲದ ಮೂಲಕ ವಿದ್ಯಾರ್ಥಿಗಳ ಜಂಘೀಬಲ ಅಡಗಿಸುವ ಪ್ರಯತ್ನ ನಡೆದಿತ್ತು. ಆದರೆ ಪ್ರತಿಭಟನೆ ದೇಶಾದ್ಯಂತ ವ್ಯಾಪಿಸುವ ಲಕ್ಷಣ ಕಂಡು ಬರುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರು ರಾತೋ ರಾತ್ರಿ ವೀಡಿಯೋ ಹರಿಬಿಟ್ಟು ವಿದ್ಯಾರ್ಥಿಗಳಿಗೆ ಬೆಂಬಲವಾಗಿ ಮಾತನಾಡಿದ್ದರು. ಆದರೂ ಪಟ್ಟು ಬಿಡದ ಪ್ರತಿಭಟನಾಕಾರರ ಧೋರಣೆಯಿಂದ ಇದೀಗ ಶಿಕ್ಷಣ ಸಚಿವರು ಕೂಡಾ ಮಂಡಿಯೂರಿದ್ದಾರೆ. ಪ್ರದಾನ್ ಅವರು ರಾಜೀನಾಮೆ ಘೋಷಿಸಿದ್ದಾರೆ. ಆದರೆ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪ್ರಧಾನಿ ಅಥವಾ ರಾಷ್ಟ್ರಪತಿ ಅವರಿಂದ ಅಂಗೀಕಾರವಾದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದು ಇದೀಗ ಉಗ್ರ ಹೋರಾಟಕ್ಕಿಳಿದಿರುವ ಯುವ ಸಮೂಹಕ್ಕೆ ಅತಿದೊಡ್ಡ ಗೆಲುವು ಸಿಕ್ಕಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದ 2 ಪುಟಗಳ ರಾಜೀನಾಮೆ ಪತ್ರವನ್ನು ಧರ್ಮೇಂದ್ರ ಪ್ರಧಾನ್ ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ನೀಟ್ ವಿಚಾರವನ್ನು ರಾಷ್ಟ್ರವಿರೋಧಿ ಶಕ್ತಿಗಳು ಗೊಂದಲ ಸೃಷ್ಟಿಸಲು ಮತ್ತು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳದಂತೆ ತಡೆಯುವ ಉದ್ದೇಶದಿಂದ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ ಎಂದು ಪತ್ರದಲ್ಲಿ ಪ್ರಧಾನ್ ಅವರು ಉಲ್ಲೇಖಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಖಂಡಿಸಿ ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದು, ಕೇಂದ್ರ ಸರ್ಕಾರದ ಮೇಲೆ ತೀವ್ರ ಒತ್ತಡ ನಿರ್ಮಾಣವಾಗಿತ್ತು. ಈ ಬೆಳವಣಿಗೆಯ ನಡುವೆ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಮಹತ್ವದ ರಾಜಕೀಯ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.
ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ಬಗ್ಗೆ ಪ್ರತಿಕ್ರಯಿಸಿರುವ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರು, ಧರ್ಮೇಂದ್ರ ಪ್ರಧಾನ ಅವರು ಸುದೀರ್ಘ ಪತ್ರ ಬರೆದು ತಮ್ಮ ಸಾಧನೆ ಹೇಳಲು ಹೋಗಿ ನಗೆ ಪಾಟಲಿಗೀಡಾಗಿದ್ದಾರೆ. ಧರ್ಮೆಂದ್ರ ಪ್ರಧಾನ್ ಅಂಥವರು ಸಚಿವರಾಗಿರುವುದೇ ಈ ರಾಷ್ಟ್ರದ ದುರಂತ ಎಂದು ಕಿಡಿ ಕಾರಿದ್ದಾರೆ.











0 comments:
Post a Comment