ದೇವಸ್ಥಾನಗಳ ಹುಂಡಿ ಹಣ ಎಣಿಕೆ ಪ್ರಕ್ರಿಯೆ ಸಂಪೂರ್ಣ ವೀಡಿಯೋ ಚಿತ್ರೀಕರಣ ನಡೆಸಲು ಎಡಿಸಿ ಸೂಚನೆ - Karavali Times ದೇವಸ್ಥಾನಗಳ ಹುಂಡಿ ಹಣ ಎಣಿಕೆ ಪ್ರಕ್ರಿಯೆ ಸಂಪೂರ್ಣ ವೀಡಿಯೋ ಚಿತ್ರೀಕರಣ ನಡೆಸಲು ಎಡಿಸಿ ಸೂಚನೆ - Karavali Times

728x90

18 July 2026

ದೇವಸ್ಥಾನಗಳ ಹುಂಡಿ ಹಣ ಎಣಿಕೆ ಪ್ರಕ್ರಿಯೆ ಸಂಪೂರ್ಣ ವೀಡಿಯೋ ಚಿತ್ರೀಕರಣ ನಡೆಸಲು ಎಡಿಸಿ ಸೂಚನೆ

ಮಂಗಳೂರು, ಜುಲೈ 18, 2026 (ಕರಾವಳಿ ಟೈಮ್ಸ್) : ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಾಲಯಗಳಲ್ಲಿ ಹುಂಡಿ ಎಣಿಕೆ/ ಲೆಕ್ಕಪತ್ರ ನಿರ್ವಹಣೆ ಸಂದರ್ಭದಲ್ಲಿ ಕಳ್ಳತನ ಮತ್ತು ಹಣ ಇತ್ಯಾದಿಗಳ ದುರುಪಯೋಗವಾಗದಂತೆ  ದೇವಾಲಯಗಳ ಚರಾಸ್ತಿಗಳ ಸಂರಕ್ಷಣೆ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ರಾಜು ಕೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜುಲೈ 18 ರಂದು ನಡೆದ ಧಾರ್ಮಿಕ ದತ್ತಿ ಇಲಾಖೆಯ ಜಿಲ್ಲಾ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇವಾಲಯಗಳ ವಿವಿಧ ಸೂಕ್ತ ಜಾಗಗಳನ್ನು ಗುರುತಿಸಿ, ಎಲ್ಲರಿಗೂ ಕಾಣುವಂತೆ ಹುಂಡಿಗಳನ್ನು ಅಳವಡಿಸಿ, ಸೂಕ್ತ ಭದ್ರತೆ ಒದಗಿಸಬೇಕು. ಡಿಜಿಟಲ್ ದೇಣಿಗೆ ಮತ್ತು ನಗದು ರಹಿತ ಪಾವತಿಗಳನ್ನು ಸುಗಮಗೊಳಿಸಲು, ಭಕ್ತರು ಮತ್ತು ಸಂದರ್ಶಕರು ದೇಣಿಗೆ ನೀಡಲು, ಪ್ರಸಾದ, ಸೇವಾ ಟಿಕೆಟ್‍ಗಳು ಮತ್ತು ಇತರ ದೇವಾಲಯ ಸೇವೆಗಳನ್ನು ನಗದು ರಹಿತ ವಿಧಾನಗಳ ಮೂಲಕ ಖರೀದಿಸಲು ದೇವಾಲಯಗಳಲ್ಲಿ ಡಿಜಿಟಲ್ ಪಾವತಿ ಸೌಲಭ್ಯಗಳನ್ನು ಒದಗಿಸಬೇಕು. ಹಾಗೂ  ಕ್ಯೂ ಆರ್ ಕೋಡ್ ಗಳನ್ನು ದೇವಾಲಯದ ಅಧಿಕಾರಿಗಳು ಆಗಾಗ್ಗೆ ಪರಿಶೀಲಿಸುತ್ತಿರಬೇಕು ಎಂದು ಸೂಚಿಸಿದರು.

ಹುಂಡಿ ಎಣಿಕೆಯನ್ನು ಸಂಬಂಧಪಟ್ಟ ತಹಶೀಲ್ದಾರರ ಮೇಲ್ವಿಚಾರಣೆಯಲ್ಲಿ ನಡೆಸಿ, ಹುಂಡಿ ಎಣಿಕೆ ಸಂದರ್ಭದಲ್ಲಿ ಸ್ವೀಕೃತವಾಗಬಹುದಾದ ಚಿನ್ನ ಬೆಳ್ಳಿ ಇತ್ಯಾದಿ ವಸ್ತುಗಳನ್ನು ಎಣಿಕೆ ದಿನದಂದೇ ಕಡ್ಡಾಯವಾಗಿ ಮೌಲ್ಯಮಾಪನ ಮಾಡಿಸಿ ಅಂದೇ ಸಂಬಂಧಪಟ್ಟ ಜಿಲ್ಲಾ ಉಪ ಖಜಾನೆಯಲ್ಲಿ ಸೂಕ್ತ ಮೇಲ್ವಿಚಾರಣೆಯೊಂದಿಗೆ ಜಮಾ ಮಾಡಬೇಕು ಎಂದ ಅವರು ಹುಂಡಿ ಎಣಿಕೆ ಪ್ರಕ್ರಿಯೆಯ ಸಂದರ್ಭದಲ್ಲಿ, ಸ್ಥಳಾಂತರಿಸಬಹುದಾದ ಹುಂಡಿಯನ್ನು ಸ್ಥಳಾಂತರಿಸುವುದರಿಂದ ಪ್ರಾರಂಭಿಸಿ, ಹುಂಡಿ ಹಣವನ್ನು ಹುಂಡಿಯಿಂದ ಹೊರ ತೆಗೆಯುವ ಹಾಗೂ ಹುಂಡಿ ಎಣಿಕೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸಿಬ್ಬಂದಿಗೆ ಎಣಿಕೆ ಮಾಡಲು ನೀಡುವ ಹಣ ಮತ್ತು ಅವರು ಎಣಿಕೆ ಮಾಡಿದ ನಂತರ ಹಿಂದಿರುಗಿಸುವವರೆಗೆ ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣವನ್ನು ದಿನಾಂಕ ಮತ್ತು ಸಮಯ ದಾಖಲೆಯಾಗುವಂತೆ ಕಡ್ಡಾಯವಾಗಿ ಚಿತ್ರೀಕರಿಸಬೇಕು ಎಂದರು.

ಸ್ಥಳೀಯ ಕಂದಾಯ ಅಧಿಕಾರಿಗಳು, ಪೆÇಲೀಸ್ ಅಧಿಕಾರಿಗಳು, ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಪ್ರಾಧಿಕಾರಗಳು ಮತ್ತು ಇತರೆ ಸಂಬಂಧಪಟ್ಟ ಅಧಿಕಾರಿಗಳು ಕನಿಷ್ಠ 15 ದಿನಗಳಿಗೊಮ್ಮೆ ದೇವಾಲಯಗಳಿಗೆ ಜಂಟಿಯಾಗಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಎಲ್ಲಾ ವ್ಯವಸ್ಥೆಗಳು ಸುವ್ಯವಸ್ಥಿತ ರೀತಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಕುಂದು ಕೊರತೆಗಳು ಕಂಡು ಬಂದಲ್ಲಿ ತಕ್ಷಣವೇ  ಪರಿಹರಿಸಲು ಸಂಬಂಧಪಟ್ಟವರಿಗೆ  ನಿರ್ದೇಶನ ನೀಡಲು ಅವರು ಸೂಚಿಸಿದರು.

ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ರಸ್ತೆ ಸಂಪರ್ಕ, ವಾಹನ ಪಾರ್ಕಿಂಗ್ ವ್ಯವಸ್ಥೆ, ದೇವಾಲಯಗಳಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲು ಅವರು ಸೂಚಿಸಿದರು.

ಸಭೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತೆ ಜಯಮ್ಮ, ಮುಜುರಾಯಿ ತಹಶೀಲ್ದಾರ್ ಕಿರಣ್,  ತಾಲೂಕು ತಹಶೀಲ್ದಾರ್ ಗಳು, ಧಾರ್ಮಿಕ ದತ್ತಿ ಇಲಾಖೆಯ ಧಿಕಾರಿಗಳ ಕಾರ್ಯದರ್ಶಿಗಳು/ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು, ಆಡಳಿತಾಧಿಕಾರಿಗಳು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ದೇವಸ್ಥಾನಗಳ ಹುಂಡಿ ಹಣ ಎಣಿಕೆ ಪ್ರಕ್ರಿಯೆ ಸಂಪೂರ್ಣ ವೀಡಿಯೋ ಚಿತ್ರೀಕರಣ ನಡೆಸಲು ಎಡಿಸಿ ಸೂಚನೆ Rating: 5 Reviewed By: karavali Times
Scroll to Top