ಬಂಟ್ವಾಳ, ಜುಲೈ 17, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡಿನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ಹೊತ್ತಿಗೆ ದೂರದ ಸಂಬಂಧಿ ಆರೋಪಿ ಚೇತನ್ ಎಂಬಾತನ ಕತ್ತಿನೇಟಿಗೆ ಬಲಿಯಾದ 21 ವರ್ಷದ ಯುವತಿ ಲಾವಣ್ಯಳ ಕೊಲೆ ಆರೋಪಿ ಚೇತನ್ ಎಂಬಾತನನ್ನು ಶುಕ್ರವಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಸುವ ವೇಳೆ ಆತ ಇಲಿ ಪಾಷಾಣ ಸೇವಿಸಿದ್ದರಿಂದ ಆತನನ್ನು ವೈದ್ಯಕೀಯ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ಪೊಲೀಸರ ವಶಕ್ಕೆ ದೊರೆತ ಬಳಿಕ ಹೆಚ್ಚಿನ ಪೊಲೀಸರು ತನಿಖೆ ನಡೆಸಿ ಹೆಚ್ಚಿನ ವಿವರ ದೊರೆಯಬಹುದೆಂದು ನಿರೀಕ್ಷಿಸಲಾಗಿದೆ.
ಈ ಮಧ್ಯೆ ಲಾವಣ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಬಳಿಕ ಆಕೆಯ ಕುಟುಂಬಿಕರಿಗೆ ಹಸ್ತಾಂತರಿಸಲಾಗಿದೆ. ಸಚಿವ ಯು ಟಿ ಖಾದರ್, ಮಾಜಿ ಸಚಿವ ಬಿ ರಮಾನಾಥ ರೈ, ಸಂಸದ ಕ್ಯಾ ಬ್ರಿಜೇಶ್ ಚೌಟ, ಪ್ರಮುಖರಾದ ಹರೀಶ್ ಕುಮಾರ್, ಪದ್ಮರಾಜ್ ಪೂಜಾರಿ, ಮಮತಾ ಗಟ್ಟಿ ಸಹಿತ ಹಲವು ಪ್ರಮುಖರು ಲಾವಣ್ಯಳ ಮನೆಗೆ ಭೇಟಿ ನೀಡಿದ್ದು, ಮೃತಳ ಅಂತಿಮ ದರ್ಶನ ಪಡೆದರು. ಕುಟುಂಬಿಕರಿಗೆ ಸಾಂತ್ವನ ಹೇಳುವ ಪ್ರಯತ್ನವನ್ನು ನಾಯಕರುಗಳು ನಡೆಸಿದರೂ ಅಮಾಯಕ ಮನೆ ಮಗಳನ್ನು ಕಳೆದುಕೊಂಡ ಹೆತ್ತವರು ಹಾಗೂ ಸಹೋದರಿಯರು-ಕುಟುಂಬಿಕರ ದುಃಖಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಮಗಳನ್ನು ಕಳೆದುಕೊಂಡ ಹೆತ್ತವರು ಹಾಗೂ ಸಹೋದರಿಯರ ಆಕ್ರಂದನ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರಲ್ಲೂ ಆರೋಪಿಯ ಕೃತ್ಯದ ಬಗ್ಗೆ ಆಕ್ರೋಶ ಎದ್ದು ಕಾಣುತ್ತಿತ್ತು.













0 comments:
Post a Comment