ಬಂಟ್ವಾಳ, ಜುಲೈ 27 2026 (ಕರಾವಳಿ ಟೈಮ್ಸ್) : ಮೇರಮಜಲು ಗ್ರಾಮದ ಮಯ್ಯಾಡಿ ಎಂಬಲ್ಲಿನ ಸರಕಾರಿ ಗುಡ್ಡದಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕ ಜೂಜಾಟದ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿದ ಘಟನೆ ಜುಲೈ 26 ರಂದು ನಡೆದಿದೆ.
ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಸೈ ಲೋಲಾಕ್ಷ ಕೆ ಅವರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಬಂದ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಿದ್ದು, ಬಂಟ್ವಾಳ ನಿವಾಸಿ ಸುರೇಶ (38) ಹಾಗೂ ಅಡ್ಯಾರ್ ನಿವಾಸಿ ಸುರೇಶ ಶೆಟ್ಟಿ ಎಂಬವರನ್ನು ಹಿಡಿದು ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲದೆ ಜೂಜಾಟ ನಡೆಸುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಅರುಣ್ ಹಾಗೂ ಶರತ್ ಮತ್ತು ಇತರು ಪರಾರಿಯಾಗಿದ್ದಾರೆ.
ಜೂಜಾಟ ಸ್ಥಳದಿಂದ 1800/- ರೂಪಾಯಿ ಮೌಲ್ಯದ 5 ಕೋಳಿಗಳು ಸಹಿತ ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment