ಮಂಗಳೂರು, ಜುಲೈ 23, 2026 (ಕರಾವಳಿ ಟೈಮ್ಸ್) : ಕೇರಳದ ಪ್ರಸಿದ್ದ ಇಸ್ಲಾಮಿಕ್ ಪಂಡಿತ, ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ, ಜಾಮಿಅ ನೂರಿಯ್ಯಾ ಪ್ರಾಂಶುಪಾಲ, ಶೈಖುಲ್ ಜಾಮಿಅ ಪೆÇ್ರ. ಕೆ. ಆಲಿಕುಟ್ಟಿ ಉಸ್ತಾದ್ (81) ಅವರು ಜುಲೈ 23 ರಂದು ಗುರುವಾರ ನಿಧನರಾಗಿದ್ದಾರೆ.
ಕೇರಳದ ಪ್ರಸಿದ್ಧ ಇಸ್ಲಾಮಿಕ್ ವಿದ್ವಾಂಸ, ಶಿಕ್ಷಕ, ಲೇಖಕ, ವಾಗ್ಮಿ ಮತ್ತು ಸಂಘಟನಾ ನಾಯಕರಾಗಿದ್ದ ಇವರು 1945ರಲ್ಲಿ ಮಲಪ್ಪುರಂ ಜಿಲ್ಲೆಯ ತಿರೂರ್ ಕಾಡಿನಲ್ಲಿ ಮೂಸ ಹಾಜಿ ಮತ್ತು ಬಿಯ್ಯತ್ತು ಕುಟ್ಟಿ ದಂಪತಿಗಳ ಪುತ್ರರಾಗಿ ಜನಿಸಿದರು. ಅವರ ಪ್ರಾಥಮಿಕ ವಿದ್ಯಾಭ್ಯಾಸವನ್ನು ತಾತ ಅಲಿ ಹಾಜಿ ಅವರ ಮಾರ್ಗದರ್ಶನದಲ್ಲಿ ಆರಂಭಿಸಿದರು. ನಂತರ ಸೈದಲವಿ ಮುಸ್ಲಿಯಾರ್ ಸೇರಿದಂತೆ ಹಲವು ಉಲಮಾಗಳಿಂದ ಧಾರ್ಮಿಕ ಶಿಕ್ಷಣ ಪಡೆದರು.
ಬಳಿಕ ಪಟ್ಟಿಕ್ಕಾಡ್‍ನ ಪ್ರಸಿದ್ಧ ಜಾಮಿಅ ನೂರಿಯ್ಯಾ ಅರಬಿಕ್ ಕಾಲೇಜಿಗೆ ಸೇರಿ, ಕೇರಳದ ಸುಪ್ರಸಿದ್ದ ಪಂಡಿತರಾದ ಇ.ಕೆ. ಅಬೂಬಕರ್ ಮುಸ್ಲಿಯಾರ್, ಕುಮರಂಪುತ್ತೂರು ಕುಂಞõಲವಿ ಮುಸ್ಲಿಯಾರ್, ಎ.ಸಿ. ಜಮಾಲುದ್ದೀನ್ ಮುಸ್ಲಿಯಾರ್ ಮತ್ತು ವೆಲ್ಲೂರು ಅಬೂಬಕರ್ ಹಝ್ರತ್ ಮುಂತಾದವರಿಂದ ವಿದ್ಯಾಭ್ಯಾಸ ಪಡೆದು 1968ರಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು.
1965ರಲ್ಲಿ ಅವರು ತಮ್ಮ ಊರಿನ ಖಾಝಿಯಾಗಿ ಸೇವೆ ಆರಂಭಿಸಿದರು. 1979ರಿಂದ ಜಾಮಿಅ ನೂರಿಯ್ಯಾದಲ್ಲಿ ಬೋಧಕರಾಗಿ ಸೇವೆಗೆ ಸೇರಿದ ಅವರು ಅರಬಿ ಸಾಹಿತ್ಯ ಮತ್ತು ಫಿಖ್ ವಿಷಯಗಳನ್ನು ಬೋಧಿಸಿದರು. 2003ರಲ್ಲಿ ಜಾಮಿಅ ನೂರಿಯ್ಯಾದ ಪ್ರಾಂಶುಪಾಲರಾಗಿ ನೇಮಕಗೊಂಡರು. ಈ ಜವಾಬ್ದಾರಿಯನ್ನು ಅವರು ದೀರ್ಘಕಾಲ ನಿರ್ವಹಿಸಿ ಅನೇಕ ವಿದ್ಯಾರ್ಥಿಗಳಿಗೆ ಜ್ಞಾನ ಮಾರ್ಗದರ್ಶಕರಾದರು.
ಫಾತಿಮಾ ಇರಂಬುಝಿ ಹಾಗೂ ನಸಫೀಸಾ ಅರಿಕ್ಕೋಡು ಇವರ ಪತ್ನಿಯರಾಗಿದ್ದು, ಮೂಸ ಫೈಝಿ, ಖದೀಜಾ, ಝೈನಬ್, ಮೈಮೂನಾ, ಮರಿಯಂ, ಹಫ್ಸತ್, ಅಬೂಬಕರ್ ಇವರ ಮಕ್ಕಳಾಗಿದ್ದಾರೆ.
1986ರಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಕೇಂದ್ರ ಮುಶಾವರ ಸದಸ್ಯರಾದ ಪ್ರೊ ಅಲಿಕುಟ್ಟಿ ಉಸ್ತಾದ್, ಹಂತ ಹಂತವಾಗಿ ಸಂಘಟನೆಯ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದರು. 2010ರಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅವರು, 2016ರಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಈ ಜವಾಬ್ದಾರಿಯನ್ನು ಅವರು ಹಲವು ವರ್ಷಗಳ ಕಾಲ ಅತ್ಯಂತ ನಿಷ್ಠೆ ಮತ್ತು ಜ್ಞಾನದಿಂದ ನಿರ್ವಹಿಸಿದರು. ಅವರ ನಾಯಕತ್ವದಲ್ಲಿ ಜ್ಞಾನ, ಶಿಸ್ತು, ಸಂಘಟನೆ ಮತ್ತು ಸಮುದಾಯದ ಶಿಕ್ಷಣಕ್ಕೆ ವಿಶೇಷ ಮಹತ್ವ ದೊರೆಯಿತು.
ಅಲಿಕುಟ್ಟಿ ಉಸ್ತಾದ್ ಅವರ ಸೇವೆ ಒಂದೇ ಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ. ಜಾಮಿಅ ನೂರಿಯ್ಯಾ ಅರಬಿಕ್ ಕಾಲೇಜಿನ ಪ್ರಾಂಶುಪಾಲರು, ಸಮಸ್ತದ ಪ್ರಧಾನ ಕಾರ್ಯದರ್ಶಿ, ಖಾಝಿಯಾಗಿ ಧಾರ್ಮಿಕ ಸೇವೆ ಸಲ್ಲಿಸಿದವರು.
ಸುನ್ನಿ ಮಹಲ್ಲ್ ಫೆಡರೇಶನ್ ಇದರ ಪ್ರಮುಖ ನಾಯಕ, ಹಜ್ ಸಮಿತಿಗಳಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸಿದವರು. ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡಿನೊಂದಿಗೂ ಸಂಬಂಧ ಹೊಂದಿದ್ದರು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಇಸ್ಲಾಮಿಕ್ ಚಿಂತನೆಗಳನ್ನು ಮಂಡಿಸಿದ ವಿದ್ವಾಂಸರಾಗಿದ್ದರು.
ಪ್ರೊ ಅಲಿಕುಟ್ಟಿ ಉಸ್ತಾದ್ ಅವರು ಪ್ರಭಾಷಣಕಾರರಲ್ಲದೆ ಲೇಖಕರೂ ಆಗಿದ್ದರು. ಇಸ್ಲಾಮಿಕ್ ಚಿಂತನೆ, ಸಮಕಾಲೀನ ವಿಚಾರಗಳು ಮತ್ತು ಜಾಗತಿಕ ಮುಸ್ಲಿಂ ಸಮುದಾಯದ ವಿಷಯಗಳ ಕುರಿತು ಅವರು ಹಲವು ಕೃತಿಗಳನ್ನು ರಚಿಸಿದರು. ಅವರ ಬರಹಗಳು ಜ್ಞಾನವನ್ನು ಮಾತ್ರ ನೀಡದೆ, ಸಮಾಜದ ಬಗ್ಗೆ ಚಿಂತನೆ ಮಾಡುವಂತೆ ಪ್ರೇರೇಪಿಸುತ್ತಿದ್ದವು.
ಉಮ್ಮುಲ್ ಮದಾರಿಸ್ ಎಂದೇ ಪ್ರಸಿದ್ಧವಾದ ಧಾರ್ಮಿಕ ಕೇಂದ್ರದಿಂದ ತಮ್ಮ ಜ್ಞಾನಾರ್ಜನೆಯ ಪಯಣವನ್ನು ಆರಂಭಿಸಿದ ಉಸ್ತಾದರು, ನಂತರದ ದಿನಗಳಲ್ಲಿ ತಮ್ಮ ಅಪಾರ ಜ್ಞಾನ ಮತ್ತು ಶೈಕ್ಷಣಿಕ ಪ್ರತಿಭೆಯಿಂದ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದರು. ಕೇವಲ ಭಾರತಕ್ಕಷ್ಟೇ ಅಲ್ಲದೆ, ಜಾಗತಿಕ ಮಟ್ಟದ ಮುಸ್ಲಿಂ ವಿದ್ವಾಂಸರ ವೇದಿಕೆಗಳಲ್ಲಿಯೂ ದೇಶದ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸಿದ ಕೀರ್ತಿ ಆಲಿಕುಟ್ಟಿ ಉಸ್ತಾದರದ್ದು.
ಜಾಮಿಅ ನೂರಿಯ್ಯಾ ಸಂಸ್ಥೆಯ ‘ಶೈಖುಲ್ ಜಾಮಿಅ’ ಆಗಿ ಸಹಸ್ರಾರು ಶಿಷ್ಯರಿಗೆ (ಫೈಝಿಗಳಿಗೆ) ಧಾರ್ಮಿಕ ಹಾಗೂ ಭೌತಿಕ ಜ್ಞಾನವನ್ನು ಬೋಧಿಸಿ ಕೃತಾರ್ಥರಾಗಿರುವ ಇವರು ಅರೇಬಿಕ್, ಇಂಗ್ಲಿಷ್, ಮಲಯಾಳಂ ಮತ್ತು ಉರ್ದು ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿ ಬಹುಭಾಷಾ ಪಂಡಿತರಾಗಿದ್ದರು. ಇಸ್ಲಾಮಿಕ್ ಗ್ರಂಥಗಳ ರಚನೆ ಮತ್ತು ಜಾಗತಿಕ ಸಮ್ಮೇಳನಗಳಲ್ಲಿನ ತಮ್ಮ ಭಾಷಣಗಳಿಂದ ಗಮನ ಸೆಳೆದಿದ್ದರು.
ಜುಲೈ 24 ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಮೃತರ ಜನಾಝ ನಮಾಝ್ ನಡೆಯಲಿದ್ದು, ಮನೆಯಲ್ಲಿ ಮಯ್ಯಿತ್ ಸ್ನಾನ ನೆರವೇರಿಸಿ, ಕುಟುಂಬ ಸದಸ್ಯರ ಅಂತಿಮ ದರ್ಶನದ ನಂತರ, ತಿರೂರ್ ಕ್ಕಾಡ್ ಅನ್ವರುಲ್ ಇಸ್ಲಾಂ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಲಾಗುವುದು. ಮನೆಯಲ್ಲಿನ ಸ್ಥಳಾವಕಾಶದ ಕೊರತೆಯಿಂದ ಸಾರ್ವಜನಿಕರು ನೇರವಾಗಿ ಅನ್ವರುಲ್ ಇಸ್ಲಾಂ ಆವರಣಕ್ಕೆ ಆಗಮಿಸುವಂತೆ ಕೋರಲಾಗಿದೆ.
ಪ್ರೊ ಆಲಿ ಕುಟ್ಟಿ ಉಸ್ತಾದರ ನಿಧನವು ಇಸ್ಲಾಮಿನ ವಿದ್ವತ್ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹಲವು ಮಂದಿ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.











0 comments:
Post a Comment