ಮಂಗಳೂರು, ಜುಲೈ 01, 2026 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮಳೆ ಪರಿಣಾಮ ನಗರದಲ್ಲಿ ಭಾರೀ ದುರಂತವೊಂದು ಜುಲೈ 1 ರ ಮುಂಜಾನೆ ವೇಳೆ ಸಂಭವಿಸಿ ಇಬ್ಬರು ಬಾಲಕಿಯರ ಸಹಿತ ಮೂವರು ಮೃತಪಟ್ಟ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.
ಕಂಕನಾಡಿ ಪೆÇಲೀಸ್ ಠಾಣಾ ವ್ಯಾಪ್ತಿಯ ನಾಗುರಿ ಪ್ರದೇಶದ ಗರೋಡಿಯ ಮಾರಿಯಲ್ ಹೌಸ್ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಕುಟುಂಬಗಳ ಮೇಲೆ ಮನೆಯ ತಡೆಗೋಡೆ ಕುಸಿದು ಈ ಭಾರೀ ದುರಂತ ಸಂಭವಿಸಿದೆ.
ಮೃತರನ್ನು ಬಿಹಾರ ಮೂಲದ ದಂಪತಿಗಳಾದ ಲಾಲ್ ಬಾಬು-ಇಂದು ದಂಪತಿಯ ಪುತ್ರಿಯರಾದ ಅನಾಮಿಕಾ (8), ಪರಿ (4) ಹಾಗೂ ಉಡುಪಿ ಮೂಲದ ಬಾಲಕೃಷ್ಣ ಎಂಬವರ ಪತ್ನಿ ಶಾಂತಾ (45) ಎಂದು ಗುರುತಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರು ಮೃತರ ಮಾಹಿತಿ ಹಂಚಿಕೊಂಡಿದ್ದಾರೆ. ಗೋಡೆ ಕುಸಿತಕ್ಕೆ ನಿಖರ ಕಾರಣವೇನು ಎಂಬುದನ್ನು ತಿಳಿಯಲು ಅದರ ರಚನಾತ್ಮಕ ಸುರಕ್ಷತೆ ಕುರಿತು ತನಿಖೆ ನಡೆಸಲಾಗುತ್ತಿದೆ. ಅಲ್ಲದೆ, ಕಳಪೆ ಕಾಮಗಾರಿ ನಡೆಸಿರುವವರು ಹಾಗೂ ಭೂಕುಸಿತದ ಅಪಾಯ ಹೆಚ್ಚಿಸುವ ರೀತಿಯಲ್ಲಿ ಅನಧಿಕೃತವಾಗಿ ಮಣ್ಣು ತೆಗೆಯುವ ಕೆಲಸ ನಡೆಸಿರುವವರ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ. ಈ ಸಂಬಂಧ ತಾಂತ್ರಿಕ ತಜ್ಞರ ಅಧಿಕೃತ ಅಭಿಪ್ರಾಯ ಪಡೆಯಲಾಗುವುದು. ತಜ್ಞರ ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೆÇಲೀಸ್ ಆಯುಕ್ತರು ತಿಳಿಸಿದ್ದಾರೆ.
ಜುಲೈ 1 ರ ಬುಧವಾರ ಬೆಳಗಿನ ಜಾವ ಸುಮಾರು 4.45 ರಿಂದ 5 ಗಂಟೆಯ ನಡುವೆ ಈ ದುರಂತ ಸಂಭವಿಸಿದೆ. ಕಾಂಪೌಂಡ್ ಗೋಡೆಯ ಕೆಳಭಾಗದಲ್ಲಿದ್ದ ಬಾಡಿಗೆ ಮನೆಗಳಲ್ಲಿ ಒಟ್ಟು ನಾಲ್ಕು ಕುಟುಂಬಗಳು ವಾಸಿಸುತ್ತಿದ್ದು, ನಾಲ್ಕು ಮನೆಗಳ ಹಿಂಬದಿಯ ಗೋಡೆಗಳು ಕುಸಿದಿವೆ. ಅವುಗಳಲ್ಲಿ ಎರಡು ಕುಟುಂಬಗಳು ಗಂಭೀರವಾಗಿ ಅನಾಹುತಕ್ಕೆ ಒಳಗಾಗಿವೆ.
ಬಿಹಾರ ಮೂಲದ ಲಾಲ್ ಬಾಬು (37) ಅವರು ಪತ್ನಿ ಇಂದು (34), ನಾಲ್ವರು ಹೆಣ್ಣು ಮಕ್ಕಳಾದ ಅಲ್ಕಾ (14), ಅನುಷ್ಕಾ (11), ಅನಾಮಿಕಾ (7) ಹಾಗೂ ಪರಿ (4) ಅವರೊಂದಿಗೆ ಕಳೆದ 8 ವರ್ಷಗಳಿಂದ ಇಲ್ಲಿ ವಾಸವಾಗಿವೆ. ಇವರ ಇಬ್ಬರು ಪುತ್ರಿಯರಾದ ಅನಾಮಿಕಾ ಹಾಗೂ ಪರಿ ಇದೀಗ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಲಾಲ್‍ಬಾಬು, ಪತ್ನಿ ಇಂದು ಹಾಗೂ ಇಬ್ಬರು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಡುಪಿ ಮೂಲದ ಬಾಲಕೃಷ್ಣ (50), ಅವರ ಪತ್ನಿ ಶಾಂತಾ (45) ಅವರು ಕಳೆದ 8 ತಿಂಗಳಿಂದ ಇಲ್ಲಿ ವಾಸವಾಗಿದ್ದರು. ಬಾಲಕೃಷ್ಣ ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಪತ್ನಿ ಶಾಂತಾ ದುರಂತದಲ್ಲಿ ಮೃತಪಟ್ಟಿದ್ದಾರೆ.
ಗಾಯಾಳುಗಳನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೃತಪಟ್ಟ ಮೂವರ ಮೃತದೇಹವನ್ನು ಕಾರ್ಯಾಚರಣೆ ನಡೆಸಿ ಹೊರತೆಗೆಯಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್ ವಿ, ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಮನಪಾ ಕಮಿಷನರ್ ರವಿಚಂದ್ರ ನಾಯಕ್ ಸಹಿತ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದುರಂತ ಹಿನ್ನಲೆ : ಸಚಿವ ಖಾದರ್ ದೆಹಲಿ ಪ್ರವಾಸ ಮೊಟಕು
ನಗರದ ನಾಗೂರಿಯಲ್ಲಿ ಮನೆ ಕುಸಿದು ಮೂವರು ಸಾವನ್ನಪ್ಪಿದ ಘಟನೆಯ ಹಿನ್ನಲೆಯಲ್ಲಿ ದೆಹಲಿ ಪ್ರವಾಸದಲ್ಲಿರುವ ಆರೋಗ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಯು ಟಿ ಖಾದರ್ ಅವರು ತಮ್ಮ ಪ್ರವಾಸ ಮೊಟಕುಗೊಳಿಸಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ ಸಚಿವರು, ತ್ವರಿತ ಪರಿಹಾರ ಕ್ರಮಗಳಿಗೆ ಸೂಚಿಸಿದ್ದಾರೆ. ಗಾಯಾಳುಗಳಿಗೆ ಸರಕಾರದ ವತಿಯಿಂದಲೇ ಆಸ್ಪತ್ರೆಯಲ್ಲಿ ಚಿಕಿತ್ಸಾ ವೆಚ್ಚ ಭರಿಸಲು ಹಾಗೂ ಮೃತರ ಕುಟುಂಬದವರಿಗೆ ಇಂದೇ ಪರಿಹಾರ ಮೊತ್ತ ನೀಡಲು ಅವರು ನಿರ್ದೇಶಿಸಿದ್ದಾರೆ. ಸಂಜೆ 4 ಗಂಟೆಗೆ ಸಚಿವರು ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ಘಟನೆಗೆ ಶಾಸಕ ಕಾಮತ್ ಸಂತಾಪ : ಅಪಾಯಕಾರಿ ಸ್ಥಳಗಳ ಬಗ್ಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಲು ಸೂಚನೆ
ನಗರದಲ್ಲಿ ಕಳೆದ ರಾತ್ರಿಯಿಂದ ಸುರಿದ ಭಾರೀ ಮಳೆಯ ಕಾರಣಕ್ಕೆ ಕಂಕನಾಡಿ ಸಮೀಪ ತಡೆಗೋಡೆ ಕುಸಿದು ಮನೆಯೊಂದರ ಮೇಲ್ಛಾವಣಿಗೆ ಬಿದ್ದ ಪರಿಣಾಮ ಓರ್ವ ಮಹಿಳೆ ಸೇರಿದಂತೆ ಇಬ್ಬರು ಮಕ್ಕಳು ಅಸುನೀಗಿರುವುದು ಹೃದಯ ವಿದ್ರಾವಕ ಘಟನೆಯಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ಯಾವುದೇ ವಿಳಂಬಕ್ಕೆ ಆಸ್ಪದವಿಲ್ಲದಂತೆ ಮೃತಪಟ್ಟ ಕುಟುಂಬದವರಿಗೆ ಸೂಕ್ತ ಪರಿಹಾರ ಲಭಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದು, ಶೀಘ್ರ ಗುಣಮುಖವಾಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಸಂಪೂರ್ಣ ಚಿಕಿತ್ಸೆಯ ವೆಚ್ಚವನ್ನು ರಾಜ್ಯ ಸರ್ಕಾರವೇ ನೋಡಿಕೊಳ್ಳಬೇಕು. ಹವಾಮಾನ ಇಲಾಖೆಯ ಪ್ರಕಾರ ಮಳೆಯ ಪ್ರಮಾಣ ಇನ್ನೂ ಮುಂದುವರಿಯಲಿದ್ದು ಈಗಾಗಲೇ ಅಪಾಯಕಾರಿ ಎಂದು ಗುರುತಿಸಲಾಗಿರುವ ಪ್ರದೇಶಗಳಲ್ಲಿ ವಾಸಿಸುವ ಜನರ ಬಗ್ಗೆ ಜಿಲ್ಲಾಡಳಿತವು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಸಾರ್ವಜನಿಕರೂ ಎಚ್ಚರಿಕೆ ವಹಿಸಬೇಕು ಎಂದು ಶಾಸಕರು ತಿಳಿಸಿದ್ದಾರೆ.

























0 comments:
Post a Comment