ಬಂಟ್ವಾಳ, ಆಗಸ್ಟ್ 22, 2026 (ಕರಾವಳಿ ಟೈಮ್ಸ್) : ತಾಲೂಕಿನ ಪೆರ್ನೆ ಎಂಬಲ್ಲಿ ಹೆದ್ದಾರಿಯಲ್ಲಿ ಯಾವುದೇ ಬ್ಯಾರಿಕೇಡ್, ಸೂಚನಾ ಫಲಕ ಅಳವಡಿಸದೆ ಹಿಟಾಚಿ ಚಾಲಕ ರಸ್ತೆ ಕೆಲಸ ಮಾಡುತ್ತಿದ್ದ ಕಾರಣ ಹೆದ್ದಾರಿಯಲ್ಲಿ ಬರುತ್ತಿದ್ದ ಸ್ಕೂಟರ್ ಚಾಲಕ ನಿಲ್ಲಿಸಿದಾಗ ಹಿಂದಿನಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಾಯಗೊಂಡ ಘಟನೆ ಆಗಸ್ಟ್ 21 ರಂದು ಸಂಭವಿಸಿದೆ.
ಗಾಯಗೊಂಡ ಸ್ಕೂಟರ್ ಸವಾರನನ್ನು ಕೆದಿಲ ಗ್ರಾಮದ ಗಡಿಯಾರ ನಿವಾಸಿ ಅಬೂಬಕ್ಕರ್ ಎಂದು ಹೆಸರಿಸಲಾಗಿದೆ. ಇವರು ಸ್ಕೂಟರಿನಲ್ಲಿ ಬರುತ್ತಿದ್ದ ವೇಳೆ ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಹಿಟಾಚಿ ಯಂತ್ರದ ಆಪರೇಟರ್ ಪೆರ್ನೆ ಎಂಬಲ್ಲಿ ಹೆದ್ದಾರಿ ಡಿವೈಡರ್ ಆಗಲೀ, ಸೂಚನಾ ಫಲಕವಾಗಲೀ ಅಳವಡಿಸದೆ ರಸ್ತೆ ಕೆಲಸ ಮಾಡುತ್ತಿದ್ದು, ಈ ಸಂದರ್ಭ ಹಿಟಾಚಿ ಯಂತ್ರದ ಮಣ್ಣು ಅಗೆಯುವ ಕೊಂಡಿ ಒಮ್ಮೆಲೆ ರಸ್ತೆಯ ಭಾಗಕ್ಕೆ ಬಂದಾಗ ಅಬೂಬಕ್ಕರ್ ಅವರು ಸ್ಕೂಟರ್ ನಿಲ್ಲಿಸಿದ್ದಾರೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ದೇವಿಪ್ರಸಾದ್ ಎಂಬವರು ಚಲಾಯಿಸುತ್ತಿದ್ದ ಕಾರು ಸ್ಕೂಟರಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಿಂದ ಅಬೂಬಕ್ಕರ್ ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ತಲೆ ಹಾಗೂ ಕೈ-ಕಾಲುಗಳಿಗೆ ಗಾಯಗಳಾಗಿವೆ. ಅವರನ್ನು ತಕ್ಷಣ ಸ್ಥಳೀಯರು ಮಂಗಳೂರು-ಪಡೀಲ್ ಜನಪ್ರಿಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಾಯಾಳು ಅಬೂಬಕ್ಕರ್ ಅವರ ಸಂಬಂಧಿ ಉಸೈನ್ ಜಿ ಎಂಬವರು ನೀಡಿದ ದೂರಿನಂತೆ ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment