ಬಂಟ್ವಾಳ, ಆಗಸ್ಟ್ 20, 2026 (ಕರಾವಳಿ ಟೈಮ್ಸ್) : ವ್ಯಾಪಾರದ ಹಣ ಸಂಗ್ರಹ ಮಾಡಿ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಎರಡು ಬೈಕುಗಳಲ್ಲಿ ಬಂದ ನಾಲ್ವರ ತಂಡವೊಂದು ತಲವಾರು ತೋರಿಸಿ ಬೆದರಿಸಿ ಲಕ್ಷಾಂತರ ರೂಪಾಯಿ ನಗದು ಹಣ ದರೋಡೆಗೈದು ಪರಾರಿಯಾದ ಘಟನೆ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆಮಾಡ ಎಂಬಲ್ಲಿ ಆಗಸ್ಟ್ 20 ರಂದು ಮಟ ಮಟ ಮಧ್ಯಾಹ್ನ ವೇಳೆ ಸಂಭವಿಸಿದೆ.
ಮಂಗಳೂರು ಸಮೀಪದ ಅಡ್ಯಾರ್-ಕಣ್ಣೂರು ನಿವಾಸಿ ಮಯ್ಯದ್ದಿ (40) ಎಂಬವರೇ ದರೋಡೆಗೊಳಗಾದ ವ್ಯಕ್ತಿ. ಇವರು ಕಣ್ಣೂರಿನಲ್ಲಿರುವ ಸಿಮೆಂಟ್ ಹಾಗೂ ಕಬ್ಬಿಣ ಮಾರಾಟ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ಆಗಸ್ಟ್ 20 ರಂದು ಬೈಕಿನಲ್ಲಿ ತೆರಳಿ ಹಲವು ಅಂಗಡಿಗಳಿಂದ ನಗದು ಹಣ ಸಂಗ್ರಹಿಸಿ ಕಕ್ಕೆಪದವಿನಿಂದ ಪಾಣೆಮಂಗಳೂರು ಕಡೆ ತೆರಳುವ ಮಧ್ಯೆ ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆಮಾಡ ಎಂಬಲ್ಲಿ ತಲುಪಿದಾಗ 2 ಬೈಕುಗಳಲ್ಲಿ ಬಂದ ನಾಲ್ಕು ಮಂದಿ ಅಪರಿಚಿತರು ಮಯ್ಯದ್ದಿ ಅವರಿಗೆ ತಲವಾರು ತೋರಿಸಿ ಬೆದರಿಸಿ ಅವರ ಕೈಯಲ್ಲಿದ್ದ 8.52 ಲಕ್ಷ ರೂಪಾಯಿ ಮೊತ್ತವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದಾರೆ ಎಂದು ಮಯ್ಯದ್ದಿ ಅವರು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕಾಗಮಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.












0 comments:
Post a Comment