ಬಂಟ್ವಾಳ, ಆಗಸ್ಟ್ 14, 2026 (ಕರಾವಳಿ ಟೈಮ್ಸ್) : ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಸೆಪ್ಟೆಂಬರ್ 12 ರಂದು ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ನ್ಯಾಯಾಲಯಗಳಲ್ಲಿ ನಡೆಯಲಿದೆ.
ಈ ಅದಾಲತ್ತಿನಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ಆಸ್ತಿ ವಿವಾದಗಳು, ವಿಭಾಗ ಮೊಕದ್ದಮೆಗಳು, ಹಣ ವಸೂಲಿ ಪ್ರಕರಣಗಳು, ನಿರ್ದಿಷ್ಟ ಪರಿಹಾರ ಕಾಯ್ದೆಯಡಿಯಲ್ಲಿ ದಾಖಲಾದ ಮೊಕದ್ದಮೆಗಳು, ಮೋಟಾರು ವಾಹನ ಪ್ರಕರಣಗಳು, ಎಂ ಎಂ ಆರ್ ಡಿ ಪ್ರಕರಣಗಳು, ವಿವಾಹ ಸಮನ್ವಯ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು ಮತ್ತು ಇತರ ರಾಜಿಯೋಗ್ಯ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಸಿವಿಲ್ ಮತ್ತು ಕ್ರಿಮಿನಲ್ ವಿವಾದಗಳನ್ನುಪರಿಹರಿಸಿಕೊಳ್ಳಲು ಪ್ರಯತ್ನ ಮಾಡುವುದಾಗಿದೆ.
ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಜೊತೆಗೆ ಬ್ಯಾಂಕ್ ವಸೂಲಾತಿ ಪ್ರಕರಣಗಳು, ವಿದ್ಯುತ್ ಮತ್ತು ನೀರಿನ ಶುಲ್ಕಗಳಿಗೆ ಸಂಬಂಧಿಸಿದ ವಿವಾದಗಳು, ಕಾರ್ಮಿಕ ವಿವಾದಗಳು, ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಬಹುದಾಗಿದೆ. ವಕೀಲರ ಮುಖಾಂತರ ಅಥವಾ ತಾವೇ ಖುದ್ದಾಗಿ ಸಮಿತಿಗೆ ಭೇಟಿ ನೀಡಿ ಪ್ರಕರಣವನ್ನು ರಾಜಿ ಮಾಡಿಕೊಳ್ಳಬಹುದು ಎಂದು ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ಹಾಗೂ ಸದಸ್ಯ ಕಾರ್ಯದರ್ಶಿ ಅನಿಲ್ ಪ್ರಕಾಶ್ ಎಂ ಪಿ ಅವರು ತಿಳಿಸಿದ್ದಾರೆ.
ನ್ಯಾಯಾಂಗ ಅಧಿಕಾರಿಗಳು, ಇಲಾಖಾಧಿಕಾರಿಗಳು ಮತ್ತು ಬ್ಯಾಂಕ್ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯು ವಿಚಾರಣೆ ನಡೆಸಿ ವಿವಾದಗಳನ್ನುಇತ್ಯರ್ಥ ಪಡಿಸುವಲ್ಲಿ ಮಾರ್ಗದರ್ಶನ ನೀಡಲಾಗಿತ್ತು. ಜನಸಾಮಾನ್ಯರು ಹಾಗೂ ಕಕ್ಷಿದಾರರು ದಾವಾ ಪ್ರಕರಣಗಳನ್ನು ಮತ್ತು ದಾವಾ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಇಚ್ಛಿಸುವವರು ನ್ಯಾಯಾಲಯಕ್ಕೆ ಹಾಜರಾಗಿ ರಾಷ್ಟ್ರೀಯ ಲೋಕ ಅದಾಲತ್ತಿನಲ್ಲಿ ಹಾಜರಾಗಿ ಸದುಪಯೋಗಪಡಿಸಿಕೊಳ್ಳುವಂತೆ ಅವರು ತಿಳಿಸಿದ್ದಾರೆ.























0 comments:
Post a Comment