ಬರಿಮಾರು ಶಾಲಾ ಬಸ್ ದುರಂತದಲ್ಲಿ ಮೃತ ಮಗುವಿನ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಿ : ಅಧಿಕಾರಿಗಳಿಗೆ ಸಚಿವ ಖಾದರ್ ತಾಕೀತು - Karavali Times ಬರಿಮಾರು ಶಾಲಾ ಬಸ್ ದುರಂತದಲ್ಲಿ ಮೃತ ಮಗುವಿನ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಿ : ಅಧಿಕಾರಿಗಳಿಗೆ ಸಚಿವ ಖಾದರ್ ತಾಕೀತು - Karavali Times

728x90

5 August 2026

ಬರಿಮಾರು ಶಾಲಾ ಬಸ್ ದುರಂತದಲ್ಲಿ ಮೃತ ಮಗುವಿನ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಿ : ಅಧಿಕಾರಿಗಳಿಗೆ ಸಚಿವ ಖಾದರ್ ತಾಕೀತು

ಬಂಟ್ವಾಳ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಉಸ್ತುವಾರಿ ಸಚಿವರು


ಬಂಟ್ವಾಳ, ಆಗಸ್ಟ್ 05, 2026 (ಕರಾವಳಿ ಟೈಮ್ಸ್) : ಪ್ರಾಕೃತಿಕ ವಿಕೋಪಗಳಂತಹ ದುರಂತ ಸಂದರ್ಭಗಳಲ್ಲಿ ಎಲ್ಲಾ ಇಲಾಖೆಗಳು ಒಟ್ಟಾಗಿ ಟೀಂ ವರ್ಕ್ ಮಾಡಿದರೆ ಜನರ ಕಷ್ಟಗಳಿಗೆ ತಕ್ಷಣ ಹಾಗೂ ಶಾಶ್ವತ ಪರಿಹಾರ ಸಿಗಲು ಸಾಧ್ಯವಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಯು ಟಿ ಖಾದರ್ ತಾಕೀತು ಮಾಡಿದರು. 

ಮಳೆ ಹಾನಿ ಹಿನ್ನಲೆಯಲ್ಲಿ ಆಗಸ್ಟ್ 5 ರಂದು ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ತುರ್ತು ಸಭೆ ನಡೆಸಿದ ಅವರು ಸಭೆಯಲ್ಲಿದ್ದ ಎಲ್ಲಾ ಇಲಾಖಾಧಿಕಾರಿಗಳಲ್ಲಿ ವಿವಿಧ ಇಲಾಖೆಗಳ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿದರು. 

ಮಳೆ ಹಾನಿಯಂತಹ ಪ್ರಕರಣಗಳು ನಡೆದರೆ ತಳಮಟ್ಟದ ಅಧಿಕಾರಿಗಳು ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಬೇಕು. ತಮ್ಮ ಇಲಾಖಾ ಅಧೀನದಲ್ಲಿ ಏನಾದರೂ ಕೊರತೆಗಳಿದ್ದಲ್ಲಿ ಅದನ್ನು ಬಚ್ಚಿಡದೆ ಮೇಲಧಿಕಾರಿಗಳ ಮೂಲಕ ಸರಕಾರಕ್ಕೆ ತಲುಪಿಸಬೇಕು. ಸರಕಾರದಿಂದ ಏನು ಬೇಕೋ ಅದನ್ನು ತಕ್ಷಣ ಕೇಳಿ ಪಡೆದುಕೊಳ್ಳಬೇಕು. ಸರಕಾರ ಇದುವರೆಗೂ ಬೇಕಾದಷ್ಟು ಅನುದಾನ ನೀಡಿದೆ. ಅದನ್ನು ಜನರಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಪ್ರಾಮಾಣಿಕಾಗಿ ಮಾಡಬೇಕು. ಈ ಬಗ್ಗೆ ಅಧಿಕಾರಿಗಳು ಜನರ ಕೆಲಸ ಮಾಡಲು ವಿಫಲರಾದರೆ ಜನ ಟಾರ್ಗೆಟ್ ಮಾಡುವುದು ಸರಕಾರ, ಜನಪ್ರತಿನಿಧಿಗಳು ಹಾಗೂ ಮಂತ್ರಿಗಳನ್ನಾಗಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಸಚಿವರು ಸೂಚಿಸಿದರು. 

ಕಲ್ಲಡ್ಕ ಶಾಲಾ ಬಸ್ ದುರಂತದ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳಲ್ಲಿ ಖಡಕ್ ಆಗಿ ಪ್ರಶ್ನಿಸಿದ ಸಚಿವ ಖಾದರ್ ಅಪಘಾತಕ್ಕೀಡಾದ ಬಸ್ಸಿಗೆ ವಿಮೆ ಮೊದಲಾದ ದಾಖಲೆಗಳು ಸರಿಯಾಗಿವೆಯೇ ಎಂದು ಪ್ರಶ್ನಿಸಿದರು. ಈ ಬಗ್ಗೆ ವಿಮೆ ಇಲ್ಲ ಎಂದು ಟ್ರಾಫಿಕ್ ಅಧಿಕಾರಿ ಸಚಿವರಿಗೆ ತಿಳಿಸಿದರು. ಶಾಲಾ ವಾಹನಗಳ ಎಲ್ಲಾ ದಾಖಲೆ ಪತ್ರಗಳ ಸಮರ್ಪತೆಗೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಆದೇಶ ಹೊರಡಿಸಿ ಆ ಬಗ್ಗೆ ಸಮಪರ್ಕವಾಗಿರುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರಲ್ಲದೆ ಅಪಘಾತದಲ್ಲಿ ಮೃತಪಟ್ಟ ಮಗುವಿಗೆ ಸರಕಾರ ಈಗಾಗಲೇ ಪರಿಹಾರ ಮೊತ್ತ ಹಸ್ತಾಂತರಿಸಿದೆ. ಅದಲ್ಲದೆ ಮಗುವಿನ ಕುಟುಂಬಿಕರಿಗೆ ಒಂದೋ ವಿಮಾ ಮೊತ್ತ ಸರಿಯಾಗಿ ದೊರಕುವಂತೆ ಮಾಡಬೇಕು ತಪ್ಪಿದಲ್ಲಿ ಬಸ್ ಮಾಲಕರಿಂದ ಸೂಕ್ತ ಪರಿಹಾರ ಕೊಡಿಸಬೇಕು. ಒಟ್ಟಿನಲ್ಲಿ ಮಗುವಿನ ಕುಟುಂಬಕ್ಕೆ ಯಾವುದೇ ರೀತಿಯ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಎಂದು ಸಚಿವ ಖಾದರ್ ಅಧಿಕಾರಿಗಳಿಗೆ ಸೂಚಿಸಿದರು. 

ಅಧಿಕಾರಿಗಳು ಬುದ್ದಿವಂತಿಕೆ ಹಾಗೂ ಹೃದಯವಂತಿಕೆ ಜೊತೆಗೆ ಪ್ರಜ್ಞಾವಂತಿಕೆ ಮೆರೆದು ಕೆಲಸ ಮಾಡಿದರೆ ಜನರಿಗೆ ಸರಕಾರದ ಸವಲತ್ತುಗಳು ಸಕಾಲದಲ್ಲಿ ತಲುಪಲು ಸಾಧ್ಯವಿದೆ ಎಂದ ಸಚಿವರು, ಜನರ ಕೆಲಸ ಮಾಡುವಲ್ಲಿ ನಿರ್ಲಕ್ಷ್ಯ ಮಾಡಿದರೆ ಅದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು. 

ಇದೇ ವೇಳೆ ತಾಲೂಕಿನಲ್ಲಿ ಕೆಡಿಪಿ ಸಭೆ ನಡೆಯುತ್ತಿಲ್ಲ, ಅಕ್ರಮ ಸಕ್ರಮ ಸಮಿತಿ ಸಭೆಗಳೂ ನಡೆಯುತ್ತಿಲ್ಲ. ಇದು ತಾಲೂಕಿನ ಅಭಿವೃದ್ದಿಯಲ್ಲಿ ತೀವ್ರ ಹಿನ್ನಡೆ ಅನುಭವಿಸುವಂತೆ ಮಾಡಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಸಹಿತ ಸಾರ್ವಜನಿಕರು ಸಚಿವರ ಗಮನ ಸೆಳೆದರು. ಬಂಟ್ವಾಳ ಪುರಸಭೆಗೆ ಆಡಳಿತಾಧಿಕಾರಿಯಾಗಿರುವ ಸಹಾಯಕ ಆಯುಕ್ತರು ಆಗಮಿಸುತ್ತಿಲ್ಲ ಎಂಬ ಸಾರ್ವಜನಿಕರ ಆರೋಪಕ್ಕೆ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರು ಎಸಿ ಮೇಡಂ ಕಚೇರಿಗೆ ಭೇಟಿ ನೀಡುತ್ತಲೇ ಇದ್ದಾರೆ ಎಂದರು. ಈ ಸಂದರ್ಭ ಸಚಿವರು ಸಾರ್ವಜನಿಕರ ಸಮ್ಮುಖದಲ್ಲಿ ಎಸಿ ಅವರನ್ನು ಆಹ್ವಾನಿಸಿ ಸಭೆ ನಡೆಸುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು. 

ಹಾವು ಕಚ್ಚಿದರೆ ಲಭ್ಯವಿರುವ ಔಷಧಿಗಳ ಬಗ್ಗೆ ಆರೋಗ್ಯಾಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು ಈ ಬಗ್ಗೆ ಔಷಧಿ ಕೊರತೆ ಎದುರಾಗದಂತೆ ಎಚ್ಚರ ವಹಿಸುವಂತೆ ಸೂಚಿಸಿದರು. ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸಚಿವರು ಪ್ರಶ್ನಿಸಿದ್ದು, ಯಾವುದೇ ಇಲಾಖೆಯಲ್ಲೂ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಸಚಿವರಿಗೆ ತಿಳಿಸಿದರು. 

ಪಂಚಾಯತ್ ಅಭಿವೃದ್ದಿಗೆ ಇರುವ ಅನುದಾನವನ್ನು ಯಾವುದೇ ಕಾರಣಕ್ಕೂ ಅಧಿಕಾರಿಗಳು ಕಚೇರಿ ದುರಸ್ತಿ ಅಥವಾ ಆಡಂಬರಕ್ಕೆ ಬಳಸಲು ಅವಕಾಶ ನೀಡದೆ ಪಂಚಾಯತ್ ಆಡಳಿತ ಅಧಿಕಾರಕ್ಕೆ ಬಂದ ಬಳಿಕ ಜನರ ಅಭಿವೃದ್ದಿಗೆ ವಿನಿಯೋಗಕ್ಕೆ ಬಳಸುವಂತೆ ಅನುದಾನ ಲಭ್ಯತೆಯನ್ನು ಕಾಪಾಡಿಕೊಳ್ಳುವಂತೆ ತಾ ಪಂ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಅವರಿಗೆ ಸಚಿವರು ಸೂಚಿಸಿದರು. 

ಈ ಸಂದರ್ಭ ಮಾಜಿ ಸಚಿವ ಬಿ ರಮಾನಾಥ ರೈ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಮತಾ ಡಿ ಎಸ್ ಗಟ್ಟಿ, ಬುಡಾ ಅಧ್ಯಕ್ಷ ಬೇಬಿ ಕುಂದರ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಜಿಲ್ಲಾಧಿಕಾರಿ ದರ್ಶನ್ ಎಚ್ ವಿ, ಜಿಲ್ಲಾ ಎಡಿಶನಲ್ ಎಸ್ಪಿ ಅನಿಲ್ ಕುಮಾರ್ ಭೂಮ ರೆಡ್ಡಿ, ತಹಶೀಲ್ದಾರ್ ಜಿ ಮಂಜುನಾಥ್, ಇಒ ಸಚಿನ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು. 

ತುರ್ತಾಗಿ ಬೆಂಗಳೂರಿಗೆ ತೆರಳುವ ಹಿನ್ನಲೆಯಲ್ಲಿ ತರಾತುರಿಯಲ್ಲಿ ಸಚಿವರು ತೆರಳುವ ಮಧ್ಯೆ ಹಲವು ಮಂದಿ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಚಿವರಿಗೆ ಸಲ್ಲಿಸಿ ಪರಿಹಾರ ಬಯಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಬರಿಮಾರು ಶಾಲಾ ಬಸ್ ದುರಂತದಲ್ಲಿ ಮೃತ ಮಗುವಿನ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಿ : ಅಧಿಕಾರಿಗಳಿಗೆ ಸಚಿವ ಖಾದರ್ ತಾಕೀತು Rating: 5 Reviewed By: karavali Times
Scroll to Top