ಬಂಟ್ವಾಳ, ಆಗಸ್ಟ್ 13, 2026 (ಕರಾವಳಿ ಟೈಮ್ಸ್) : ತಾಲೂಕಿನ ನರಿಕೊಂಬು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿಯ ಬಾಲಕನೋರ್ವ ತನ್ನ ವಿವೇಚನೆ ಹಾಗೂ ಸಮಯಪ್ರಜ್ಞೆ ಮೆರೆದು ಬಿಸಿಯೂಟ ಕಾರ್ಮಿಕೆ ಮಹಿಳೆಯೊಬ್ಬರನ್ನು ವಿದ್ಯುತ್ ಅವಘಡದಿಂದ ಪಾರುಮಾಡಿದ ಘಟನೆ ಇದೀಗ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದು, ಘಟನೆಯ ಬಗ್ಗೆ ಮಾಹಿತಿ ಪಡೆದ ರಾಜ್ಯದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕೂಡಾ ತಮ್ಮ ಎಕ್ಸ್ ಖಾತೆಯಲ್ಲಿ ಬಾಲಕನ ಸಮಯಪ್ರಜ್ಞೆಗೆ ಹ್ಯಾಟ್ಸಪ್ ಎಂದಿದ್ದಾರೆ.
ಶಾಲೆಯ ಬಿಸಿಯೂಟ ಕಾರ್ಮಿಕ ಮಹಿಳೆ ತನ್ನ ಕರ್ತವ್ಯ ನಿರ್ವಹಣೆಯ ಸಂದರ್ಭ ಅವರ ಕೈ ಬೆರಳು ಗ್ರೈಂಡರಿಗೆ ಸಿಲುಕಿ ಒದ್ದಾಟ ನಡೆಸುತ್ತಿದ್ದರು. ಇದನ್ನು ಗಮನಿಸಿದ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮನ್ವಿತ್ ಸಮಯ ಪ್ರಜ್ಞೆ ಮೆರೆದು ತಕ್ಷಣ ಗ್ರೈಂಡರ್ ಸ್ವಿಚ್ ಆಫ್ ಮಾಡಿದ್ದಾನೆ. ಈ ಮೂಲಕ ಕಾರ್ಮಿಕ ಮಹಿಳೆ ಸಂಭಾವ್ಯ ಅಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಘಟನೆ ಬಗ್ಗೆ ತೀವ್ರ ಸಂತಸ ವ್ಯಕ್ತಪಡಿಸಿರುವ ಕಾರ್ಮಿಕ ಮಹಿಳೆ ‘’ದೇವರೇ ಬಂದು ನನ್ನನ್ನು ರಕ್ಷಿಸಿದಂತಾಗಿದೆ’’ ಎಂದು ಉದ್ಗರಿಸಿದ್ದಾರೆ. ಸ್ವಯಂ ನಿರ್ಧಾರದಿಂದ ಸಮಯ ಪ್ರಜ್ಞೆ ಮೆರೆದ ಬಾಲಕನ ಧೈರ್ಯವನ್ನು ಶಾಲಾ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಅಂಚನ್ ಮತ್ತು ಸದಸ್ಯರು ಶ್ಲಾಘಿಸಿದ್ದಾರೆ. ಶಾಲೆಗೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನೋಣಯ್ಯ ನಾಯ್ಕ್, ಸಿ ಆರ್ ಪಿ ಜ್ಯೋತಿ ಅವರು ಭೇಟಿ ನೀಡಿ ಬಾಲಕನ ಸಮಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಯಿಸಿದ ವಿದ್ಯಾರ್ಥಿ ಮನ್ವಿತ್ ‘’ನಾನು ಶೌಚಾಲಯಕ್ಕೆಂದು ತೆರಳುತ್ತಿದ್ದೆ. ಈ ವೇಳೆ ಅಡುಗೆ ಮಾಡುವ ಸಿಬ್ಬಂದಿ ಬೊಬ್ಬೆ ಹಾಕುತ್ತಿರುವ ಶಬ್ದ ಕೇಳಿಸಿತು. ಕೂಡಲೇ ನಾನು ಸ್ಥಳಕ್ಕೆ ತೆರಳಿ ಅಡುಗೆ ಮನೆ ಮಹಿಳೆಯ ಕೈ ಗ್ರೈಂಡರಿಗೆ ಸಿಕ್ಕಿತ್ತು. ನಾನು ಹೋಗಿ ಗ್ರೈಂಡರ್ ಸ್ವಿಚ್ ಆಫ್ ಮಾಡಿದೆ. ನಂತರ ಶಿಕ್ಷಕರ ಬಳಿ ತಿಳಿಸಿದೆ’’ ಎಂದಿದ್ದಾನೆ.
ನಾನು ಅಡುಗೆ ಮಾಡುವ ವೇಳೆ ಕಾಯಿ ತುರಿಯುವ ವೇಳೆ ಬೆರಳು ಸಿಲುಕಿಕೊಂಡಿತ್ತು. ಈ ಸಂದರ್ಭ ವಿದ್ಯಾರ್ಥಿ ಮನ್ವಿತ್ ದೇವರಂತೆ ಬಂದು ಕಾಪಾಡಿದ’ ಎಂದು ಬಿಸಿಯೂಟದ ಕಾರ್ಮಿಕ ಮಹಿಳೆ ವಿದ್ಯಾರ್ಥಿ ಮನ್ವಿತ್ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಬಂಟ್ವಾಳ ತಾಲೂಕಿನ ಕುಗ್ರಾಮವಾಗಿರುವ ನರಿಕೊಂಬು ಗ್ರಾಮದ ಸರಕಾರಿ ಶಾಲಾ ಬಾಲಕನ ಸಮಯ ಪ್ರಜ್ಞೆ ಹಾಗೂ ಸಕಾಲಿಕ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದ ರಾಜ್ಯದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಬಾಲಕನ ಸಮಯ ಪ್ರಜ್ಞೆ ಹಾಗೂ ಧೈರ್ಯ ನಿಜಕ್ಕೂ ಹೃದಯಸ್ಪರ್ಶಿ ಮತ್ತು ಶ್ಲಾಘನೀಯ. ಅಡುಗೆ ಸಿಬ್ಬಂದಿಯನ್ನು ಅಪಾಯದಿಂದ ಕಾಪಾಡಿದ ಮನ್ವಿತ್ ನಿಗೆ ಹೃದಯಪೂರ್ವಕ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ.
’ವಿದ್ಯುತ್ ಚಾಲಿತ ಕಾಯಿ ತುರಿಯುವ ಯಂತ್ರದಲ್ಲಿ ಅಕ್ಷರ ದಾಸೋಹ ಸಿಬ್ಬಂದಿಯ ಕೈಬೆರಳು ಸಿಲುಕಿಕೊಂಡು ಅವರು ನೋವಿನಿಂದ ಕಿರುಚುತ್ತಿದ್ದಾಗ, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಾಲಕ ಮನ್ವಿತ್ ತಕ್ಷಣ ವಿದ್ಯುತ್ ಸ್ವಿಚ್ ಆಫ್ ಮಾಡುವ ಮೂಲಕ ಸಂಭವಿಸಬಹುದಾಗಿದ್ದ ದೊಡ್ಡ ಅಪಾಯವನ್ನು ತಪ್ಪಿಸಿದ್ದಾನೆ. ಬಾಲಕನ ಒಂದು ಕ್ಷಣದ ಜಾಗರೂಕತೆ, ಸರಿಯಾದ ನಿರ್ಧಾರವೊಂದು ಅಡುಗೆ ಸಿಬ್ಬಂದಿಯ ಕೈಬೆರಳನ್ನು ಉಳಿಸಿದೆ. ಮನ್ವಿತ್ ಎಂಬ ವಿದ್ಯಾರ್ಥಿಯ ಈ ಮಾನವೀಯ ಕಾಳಜಿ, ಧೈರ್ಯ ಮತ್ತು ಸಮಯ ಪ್ರಜ್ಞೆ ಎಲ್ಲರಿಗೂ ಮಾದರಿಯಾಗಲಿ. ಬಾಲಕನ ಮುಂದಿನ ಭವಿಷ್ಯ ಉಜ್ವಲವಾಗಲಿ, ಸಮಾಜದ ಒಳಿತಿಗಾಗಿ ಸದಾ ಸ್ಪಂದಿಸುವ ಉತ್ತಮ ಪ್ರಜೆಯಾಗಿ ಬೆಳೆದು ನಾಡಿಗೆ ಕೀರ್ತಿ ತರಲಿ ಎಂದು ಹಾರೈಸುತ್ತೇನೆ ಎಂದು ಸಿಎಂ ತಮ್ಮ ಪೋಸ್ಟಿನಲ್ಲಿ ಹೇಳಿಕೊಂಡಿದ್ದಾರೆ.












0 comments:
Post a Comment