ಮಂಗಳೂರು, ಸೆಪ್ಟೆಂಬರ್ 24, 2026 (ಕರಾವಳಿ ಟೈಮ್ಸ್) : ಸ್ಕ್ಯಾನಿಂಗ್ ಕೇಂದ್ರಗಳಿಗೆ ಅಧಿಕಾರಿಗಳು ನಿರಂತರವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪಿ.ಸಿ.ಪಿ.ಎನ್.ಡಿ.ಟಿ ಕಾಯ್ದೆಯ ನಿಯಮಗಳನ್ನು ಸ್ಕ್ಯಾನಿಂಗ್ ಸಂಸ್ಥೆಗಳು ಸಮರ್ಪಕವಾಗಿ ಪಾಲಿಸುತ್ತಿದೆಯೇ ಎಂಬುದನ್ನು ನಿಯಮಿತವಾಗಿ ಪರಿಶೀಲಿಸಬೇಕು. ನಿಯಮ ಉಲ್ಲಂಘನೆ ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಚ್.ಆರ್ ತಿಮ್ಮಯ್ಯ ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ನಡೆದ ಜನನ ಪೂರ್ವ ಲಿಂಗ ನಿರ್ಣಯ (ನಿರ್ಬಂಧ ಮತ್ತು ದುರ್ಬಳಕೆ) ತಡೆ ಕಾಯಿದೆ 1994ಕ್ಕೆ ಸಂಬಂಧಿಸಿ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಸಭೆಯಲ್ಲಿ ಮಾತನಾಡಿದರು.
ಗರ್ಭಿಣಿಯರ ಆರೋಗ್ಯದ ಸಮರ್ಪಕ ಮೇಲ್ವಿಚಾರಣೆ ಹಾಗೂ ಅಗತ್ಯ ಆರೋಗ್ಯ ಸೇವೆಗಳನ್ನು ಸಕಾಲದಲ್ಲಿ ಒದಗಿಸಲು ತಾಯಿ ಕಾರ್ಡ್ ಪ್ರಮುಖ ದಾಖಲೆಯಾಗಿದ್ದು, ಪ್ರತಿಯೊಬ್ಬ ಗರ್ಭಿಣಿಯೂ ತಾಯಿ ಕಾರ್ಡ್ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಗರ್ಭಿಣಿಯರು ಸ್ಕ್ಯಾನಿಂಗಿಗಾಗಿ ಸ್ಕ್ಯಾನಿಂಗ್ ಕೇಂದ್ರಗಳಿಗೆ ತೆರಳುವ ಸಂದರ್ಭದಲ್ಲಿ ತಾಯಿ ಕಾರ್ಡನ್ನು ತಪ್ಪದೇ ಕೊಂಡೊಯ್ಯಬೇಕು. ತಾಯಿ ಕಾರ್ಡ್ ಇಲ್ಲದೇ ಹೋದಲ್ಲಿ ಸಮೀಪದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಅಥವಾ ಆರೋಗ್ಯ ಕಾರ್ಯಕರ್ತರನ್ನು, ಆಶಾ ಕಾರ್ಯಕರ್ತರನ್ನು ಸಂಪರ್ಕಿಸಬಹುದು ಎಂದವರು ಹೇಳಿದರು.
ಸಭೆಯಲ್ಲಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷೆ (ಪಿ.ಎನ್.ಡಿ.ಟಿ) ಡಾ. ಅಮೃತಾ ಭಂಡಾರಿ, ಜಿಲ್ಲಾ ತಪಾಸಣಾ ಹಾಗೂ ಮೇಲ್ವಿಚಾರಣಾ ಸಮಿತಿ ಸದಸ್ಯೆ ಡಾ. ಸುಂದರಿ ಮೊದಲಾದವರು ಭಾಗವಹಿಸಿದ್ದರು.














0 comments:
Post a Comment