ನೈರುತ್ಯ ರೈಲ್ವೆಯಾದ್ಯಂತ ಸುರಕ್ಷಿತ ಕುಡಿಯುವ ನೀರಿಗಾಗಿ ನಿರಂತರ ಗುಣಮಟ್ಟ ಪರಿಶೀಲನೆ ಹಾಗೂ ಕಟ್ಟುನಿಟ್ಟಿನ ಮೇಲ್ವಿಚಾರಣೆ - Karavali Times ನೈರುತ್ಯ ರೈಲ್ವೆಯಾದ್ಯಂತ ಸುರಕ್ಷಿತ ಕುಡಿಯುವ ನೀರಿಗಾಗಿ ನಿರಂತರ ಗುಣಮಟ್ಟ ಪರಿಶೀಲನೆ ಹಾಗೂ ಕಟ್ಟುನಿಟ್ಟಿನ ಮೇಲ್ವಿಚಾರಣೆ - Karavali Times

728x90

29 September 2026

ನೈರುತ್ಯ ರೈಲ್ವೆಯಾದ್ಯಂತ ಸುರಕ್ಷಿತ ಕುಡಿಯುವ ನೀರಿಗಾಗಿ ನಿರಂತರ ಗುಣಮಟ್ಟ ಪರಿಶೀಲನೆ ಹಾಗೂ ಕಟ್ಟುನಿಟ್ಟಿನ ಮೇಲ್ವಿಚಾರಣೆ

ಬೆಂಗಳೂರು, ಸೆಪ್ಟೆಂಬರ್ 29, 2026 (ಕರಾವಳಿ ಟೈಮ್ಸ್) : ನೈಋತ್ಯ ರೈಲ್ವೆಯು ತನ್ನ ವಲಯದಾದ್ಯಂತ ರೈಲ್ವೆ ನಿಲ್ದಾಣಗಳು ಮತ್ತು ಕಾಲೋನಿಗಳಲ್ಲಿ ಸುರಕ್ಷಿತ ಹಾಗೂ ಕುಡಿಯಲು ಯೋಗ್ಯವಾದ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಮಗ್ರ ಮತ್ತು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ನಿಗದಿತ ನೀರಿನ ಗುಣಮಟ್ಟದ ಮಾನದಂಡಗಳನ್ನು ಪಾಲಿಸುವುದರ ಜೊತೆಗೆ, ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿಯ ಆರೋಗ್ಯ ಹಾಗೂ ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ನಿರಂತರ ಮೇಲ್ವಿಚಾರಣೆ, ನೀರಿನ ಪರೀಕ್ಷೆ ಮತ್ತು ಗುಣಮಟ್ಟ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

ನೀರಿನ ಗುಣಮಟ್ಟದ ಮೇಲ್ವಿಚಾರಣಾ ಕಾರ್ಯಕ್ರಮದಡಿ, ಉಳಿಕೆ ಕ್ಲೋರಿನ್, ಬ್ಯಾಕ್ಟೀರಿಯಾಲಾಜಿಕಲ್ ಹಾಗೂ ರಾಸಾಯನಿಕ ಗುಣಮಟ್ಟದ ಅಂಶಗಳ ಪರೀಕ್ಷೆಯನ್ನು ನಿಯಮಿತವಾಗಿ ನಡೆಸಲಾಗುತ್ತಿದೆ. ಈ ವ್ಯವಸ್ಥಿತ ಪರೀಕ್ಷೆಗಳ ಮೂಲಕ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ತ್ವರಿತವಾಗಿ ಗುರುತಿಸಿ, ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ನೈಋತ್ಯ ರೈಲ್ವೆಯಾದ್ಯಂತ ಕೈಗೊಳ್ಳಲಾಗುತ್ತಿರುವ ಪ್ರಮುಖ ಕ್ರಮಗಳು : 

1. ದೈನಂದಿನ ಉಳಿಕೆ ಕ್ಲೋರಿನ್ ಮೇಲ್ವಿಚಾರಣೆ : ರೈಲ್ವೆ ನಿಲ್ದಾಣಗಳು ಮತ್ತು ಕಾಲೋನಿಗಳಲ್ಲಿ ಆರೋಗ್ಯ ನಿರೀಕ್ಷಕರು ಪ್ರತಿದಿನ ಉಳಿಕೆ ಕ್ಲೋರಿನ್ ಮಟ್ಟವನ್ನು ಪರಿಶೀಲಿಸುತ್ತಿದ್ದು, ನೀರಿನ ಸಮರ್ಪಕ ಸೋಂಕು ನಿವಾರಣೆಯನ್ನು ಖಚಿತಪಡಿಸುತ್ತಿದ್ದಾರೆ.

2. ನಿಯಮಿತ ಕ್ಲೋರಿನೀಕರಣ : ಎಂಜಿನಿಯರಿಂಗ್ ವಿಭಾಗವು ನೀರು ಸರಬರಾಜು ವ್ಯವಸ್ಥೆಗಳಲ್ಲಿ ನಿಯಮಿತವಾಗಿ ಕ್ಲೋರಿನೀಕರಣವನ್ನು ಕೈಗೊಳ್ಳುತ್ತಿದೆ. ಉಳಿಕೆ ಕ್ಲೋರಿನ್ ಮಟ್ಟವನ್ನು ನಿರಂತರವಾಗಿ ಪರೀಕ್ಷಿಸುವ ಮೂಲಕ ಕ್ಲೋರಿನೀಕರಣದ ಪರಿಣಾಮಕಾರಿತ್ವವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ.

3. ಬ್ಯಾಕ್ಟೀರಿಯಾಲಾಜಿಕಲ್ ಮತ್ತು ರಾಸಾಯನಿಕ ಪರೀಕ್ಷೆಗಳು : ನೀರಿನ ಮಾದರಿಗಳನ್ನು ನಿಯಮಿತವಾಗಿ ಸಂಗ್ರಹಿಸಿ, ಬ್ಯಾಕ್ಟೀರಿಯಾಲಾಜಿಕಲ್ ಮತ್ತು ರಾಸಾಯನಿಕ ಗುಣಮಟ್ಟದ ಪರೀಕ್ಷೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತಿದೆ. ಬ್ಯಾಕ್ಟೀರಿಯಾಲಾಜಿಕಲ್ ಮಾದರಿಗಳನ್ನು ಮಾಸಿಕವಾಗಿ ಪರೀಕ್ಷಿಸಲಾಗುತ್ತಿದ್ದು, ರಾಸಾಯನಿಕ ಮಾದರಿಗಳನ್ನು ನಿಗದಿತ ಅವಧಿಗಳಲ್ಲಿ ಪರೀಕ್ಷಿಸಲಾಗುತ್ತದೆ.

4. ತ್ವರಿತ ಸರಿಪಡಿಸುವ ಕ್ರಮ : ಯಾವುದೇ ನೀರಿನ ಮಾದರಿಯು ನಿಗದಿತ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿಲ್ಲವೆಂದು ಕಂಡುಬಂದಲ್ಲಿ, ಸ್ವಚ್ಛಗೊಳಿಸುವಿಕೆ, ಮರು-ಕ್ಲೋರಿನೀಕರಣ ಮತ್ತು ನೀರು ಸರಬರಾಜು ವ್ಯವಸ್ಥೆಯ ಅಗತ್ಯ ತಿದ್ದುಪಡಿ ಸೇರಿದಂತೆ ತಕ್ಷಣದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ನೀರಿನ ಗುಣಮಟ್ಟವು ನಿಗದಿತ ಮಾನದಂಡಗಳಿಗೆ ಅನುಗುಣವಾಗಿದೆ ಎಂಬುದು ದೃಢಪಟ್ಟ ನಂತರವೇ ಮುಂದಿನ ಸರಬರಾಜನ್ನು ಖಚಿತಪಡಿಸಲಾಗುತ್ತದೆ.

ವಲಯಾದ್ಯಂತ ನೀರಿನ ಗುಣಮಟ್ಟ ಪರೀಕ್ಷೆಯ ಸಾರಾಂಶ :

ಅವಧಿ : 23.09.2026 ರಿಂದ 29.09.2026 ರವರೆಗೆ 

ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ವಿಭಾಗಗಳನ್ನು ಒಳಗೊಂಡಿರುವ ಕ್ರೋಢೀಕೃತ ವರದಿಯ ಪ್ರಕಾರ, ನೀರಿನ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ವ್ಯಾಪಕ ಪ್ರಮಾಣದಲ್ಲಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದೆ.

ಉಳಿಕೆ ಕ್ಲೋರಿನ್ ಪರೀಕ್ಷೆ : ಒಟ್ಟು 998 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದ್ದು, ಎಲ್ಲಾ 998 ಮಾದರಿಗಳು ಸೂಕ್ತವೆಂದು ಕಂಡುಬಂದಿವೆ. ಯಾವುದೇ ಮಾದರಿ ಅಸಮರ್ಪಕವಾಗಿಲ್ಲ ಮತ್ತು ಯಾವುದೇ ಫಲಿತಾಂಶ ಬಾಕಿ ಇಲ್ಲ.

ಬ್ಯಾಕ್ಟೀರಿಯಾಲಾಜಿಕಲ್ ವಿಶ್ಲೇಷಣೆ : ಒಟ್ಟು 67 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, 63 ಮಾದರಿಗಳು ಸೂಕ್ತವೆಂದು ಕಂಡುಬಂದಿವೆ. 4 ಮಾದರಿಗಳ ಪರೀಕ್ಷಾ ಫಲಿತಾಂಶಗಳು ಬಾಕಿ ಇವೆ.

ರಾಸಾಯನಿಕ ವಿಶ್ಲೇಷಣೆ : ಒಟ್ಟು 16 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, 15 ಮಾದರಿಗಳು ಸೂಕ್ತವೆಂದು ಕಂಡುಬಂದಿವೆ. 1 ಮಾದರಿ ಪರೀಕ್ಷಾ ಫಲಿತಾಂಶ ಬಾಕಿ ಇದೆ.

ವಿಭಾಗವಾರು ನೀರಿನ ಗುಣಮಟ್ಟ ಪರೀಕ್ಷೆಯ ವಿವರಗಳು : 

ಹುಬ್ಬಳ್ಳಿ ವಿಭಾಗ : 364 ಉಳಿಕೆ ಕ್ಲೋರಿನ್ ಮಾದರಿಗಳು, 50 ಬ್ಯಾಕ್ಟೀರಿಯಾಲಾಜಿಕಲ್ ಮಾದರಿಗಳು ಹಾಗೂ 11 ರಾಸಾಯನಿಕ ವಿಶ್ಲೇಷಣಾ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಎಲ್ಲಾ ಮಾದರಿಗಳು ಸೂಕ್ತವೆಂದು ಕಂಡುಬಂದಿವೆ. ಯಾವುದೇ ಅಸಮರ್ಪಕ ಮಾದರಿ ದಾಖಲಾಗಿಲ್ಲ.

ಬೆಂಗಳೂರು ವಿಭಾಗ : 403 ಉಳಿಕೆ ಕ್ಲೋರಿನ್ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಎಲ್ಲಾ ಮಾದರಿಗಳು ಸೂಕ್ತವೆಂದು ದೃಢಪಟ್ಟಿವೆ. 12 ಬ್ಯಾಕ್ಟೀರಿಯಾಲಜಿಕಲ್ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅವುಗಳೂ ಸಹ ಸೂಕ್ತವೆಂದು ಕಂಡುಬಂದಿವೆ. ಸಂಗ್ರಹಿಸಲಾದ 2 ರಾಸಾಯನಿಕ ಮಾದರಿಗಳ ಪೈಕಿ 1 ಮಾದರಿ ಸೂಕ್ತವೆಂದು ದೃಢಪಟ್ಟಿದ್ದು, ಮತ್ತೊಂದು ಮಾದರಿಯ ಅಂತಿಮ ಪರೀಕ್ಷಾ ಫಲಿತಾಂಶ ನಿರೀಕ್ಷಿಸಲಾಗುತ್ತಿದೆ.

ಮೈಸೂರು ವಿಭಾಗ : 231 ಉಳಿಕೆ ಕ್ಲೋರಿನ್ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಎಲ್ಲಾ ಮಾದರಿಗಳು ಸೂಕ್ತವೆಂದು ದೃಢಪಟ್ಟಿವೆ. ವಿಶ್ಲೇಷಿಸಲಾದ 5 ಬ್ಯಾಕ್ಟೀರಿಯಾಲಜಿಕಲ್ ಮಾದರಿಗಳ ಪೈಕಿ 1 ಮಾದರಿ ಸೂಕ್ತವೆಂದು ದೃಢಪಟ್ಟಿದ್ದು, ಉಳಿದ 4 ಮಾದರಿಗಳ ಪರೀಕ್ಷಾ ಫಲಿತಾಂಶಗಳು ನಿರೀಕ್ಷಿಸಲಾಗುತ್ತಿವೆ. 3 ರಾಸಾಯನಿಕ ಮಾದರಿಗಳನ್ನು ಸಹ ಸಂಗ್ರಹಿಸಲಾಗಿದ್ದು, ಎಲ್ಲಾ ಮಾದರಿಗಳು ಸೂಕ್ತವೆಂದು ದೃಢಪಟ್ಟಿವೆ.

ನೈಋತ್ಯ ರೈಲ್ವೆಯು ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ನಿರಂತರ ಮೇಲ್ವಿಚಾರಣೆ, ನಿಯಮಿತ ನೀರಿನ ಗುಣಮಟ್ಟ ಪರೀಕ್ಷೆ ಮತ್ತು ಅಗತ್ಯವಿರುವಲ್ಲಿ ತ್ವರಿತ ಸರಿಪಡಿಸುವ ಕ್ರಮಗಳನ್ನು ಮುಂದುವರಿಸುತ್ತಿದೆ. ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ್ ಕನಮಡಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ನೈರುತ್ಯ ರೈಲ್ವೆಯಾದ್ಯಂತ ಸುರಕ್ಷಿತ ಕುಡಿಯುವ ನೀರಿಗಾಗಿ ನಿರಂತರ ಗುಣಮಟ್ಟ ಪರಿಶೀಲನೆ ಹಾಗೂ ಕಟ್ಟುನಿಟ್ಟಿನ ಮೇಲ್ವಿಚಾರಣೆ Rating: 5 Reviewed By: karavali Times
Scroll to Top