ಆಪದಮಿತ್ರ ಯೋಜನೆಯಡಿ ಜಿಲ್ಲೆಯ ಸ್ವಯಂ ಸೇವಕರಿಗೆ ವಿಪತ್ತು ನಿರ್ವಹಣಾ ಕಿಟ್ ವಿತರಣೆ - Karavali Times ಆಪದಮಿತ್ರ ಯೋಜನೆಯಡಿ ಜಿಲ್ಲೆಯ ಸ್ವಯಂ ಸೇವಕರಿಗೆ ವಿಪತ್ತು ನಿರ್ವಹಣಾ ಕಿಟ್ ವಿತರಣೆ - Karavali Times

728x90

5 September 2026

ಆಪದಮಿತ್ರ ಯೋಜನೆಯಡಿ ಜಿಲ್ಲೆಯ ಸ್ವಯಂ ಸೇವಕರಿಗೆ ವಿಪತ್ತು ನಿರ್ವಹಣಾ ಕಿಟ್ ವಿತರಣೆ

ಮಂಗಳೂರು, ಸೆಪ್ಟೆಂಬರ್ 05, 2026 (ಕರಾವಳಿ ಟೈಮ್ಸ್) : ಭಾರತ ಸರ್ಕಾರದ ಗೃಹ ಮಂತ್ರಾಲಯದ ವಿಪತ್ತು ನಿರ್ವಹಣಾ ಯೋಜನೆ ಅಂಗವಾಗಿ ಆಪದಮಿತ್ರ ಯೋಜನೆ ಅಡಿಯಲ್ಲಿ ದ.ಕ. ಜಿಲ್ಲೆಯ ಒಟ್ಟು 300 ಸ್ವಯಂ ಸೇವಕರಿಗೆ ತರಬೇತಿ ನೀಡಿದ್ದು, ವಿಪತ್ತು ನಿರ್ವಹಣಾ ಕಿಟ್ ಗಳನ್ನು ಸೆ 5 ರಂದು ಪುತ್ತೂರು ಪುರಭವನದಲ್ಲಿ ಉಸ್ತುವಾರಿ ಸಚಿವ ಡಾ ಯು.ಟಿ. ಖಾದರ್ ಅವರ ಸಮ್ಮುಖದಲ್ಲಿ ವಿತರಿಸಲಾಯಿತು.

ರಾಜ್ಯದ ಹಲವು ಭಾಗಗಳು ವಿವಿಧ ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಪತ್ತುಗಳಿಗೆ ತುತ್ತಾಗುತ್ತವೆ. ಈ ದುರ್ಬಲ ಪ್ರದೇಶಗಳಲ್ಲಿ ವಾಸಿಸುವ ಸಮುದಾಯಗಳು ಬಹುಪಾಲು ಅಪಾಯದಲ್ಲಿರುತ್ತವೆ. ವಿಪತ್ತು ನಿರ್ವಹಣಾ ಪ್ರಯತ್ನಗಳ ಮುಖ್ಯ ಉದ್ದೇಶವು ಯಾವುದೇ ವಿಪತ್ತಿನಿಂದ ನೇರವಾಗಿ ಅಥವಾ ಪರೋಕ್ಷವಾಗಿ ಪರಿಣಾಮಕ್ಕೊಳಗಾದ ಪ್ರತಿಯೊಂದು ಪ್ರದೇಶಕ್ಕೂ ಮಾನವೀಯ ನೆರವು ನೀಡುವುದು. ಕೆಲವೊಮ್ಮೆ ರಕ್ಷಣಾ ತಂಡವು ಬರುವವರೆಗೆ ಅಲ್ಲಿನ ಸಮುದಾಯವು ತನ್ನದೇ ಆದ ವಿಪತ್ತು ಪ್ರತಿಕ್ರಿಯೆ ಮಾಡಬೇಕಾಗುತ್ತದೆ. ವಿಪತ್ತು ನಿರ್ವಹಣೆಯಲ್ಲಿ ಸಮುದಾಯದ ಭಾಗವಹಿಸುವಿಕೆ ಬಹುಮುಖ್ಯವಾಗುತ್ತದೆ.

ಯಾವುದೇ ವಿಪತ್ತು ಸಂಭವಿಸಿದಾಗ ಅಲ್ಲಿನ ಸಮುದಾಯವು ಮೊದಲು ಪ್ರತಿಕ್ರಿಯಿಸುತ್ತದೆ. ಸಮುದಾಯದ ಪಾಲ್ಗೊವಿಕೆಯಿಲ್ಲದೆ ವಿಪತ್ತುಗಳಿಂದಾಗುವ ಹಾನಿ ಅಥವಾ ಅಪಾಯಗಳನ್ನು ತಡೆಗಟ್ಟಲು ಸಾಧ್ಯವಿಲ್ಲ.  ವಿಪತ್ತಿನಿಂದಾಗುವ ಅಪಾಯಗಳನ್ನು ಕಡಿತಗೊಳಿಸಲು ಸಮುದಾಯಗಳಿಗೆ ವಿಪತ್ತು ನಿರ್ವಹಣೆ ಕುರಿತು ಜಾಗೃತಿ ಮೂಡಿಸಿ ಸಮುದಾಯದ ಸಾಮಥ್ರ್ಯಾಭಿವೃದ್ದಿಯನ್ನು ಬಲಪಡಿಸುವ ಅಗತ್ಯತೆ ಬಹು ಮುಖ್ಯವಾಗುತ್ತದೆ. ಸಮುದಾಯ ಮಟ್ಟದಲ್ಲಿ ಸಾಮಥ್ರ್ಯಗಳನ್ನು ಬಲಪಡಿಸುವುದು ಮಾತ್ರವಲ್ಲ, ಅವುಗಳನ್ನು ನಿರ್ಮಿಸುವುದು ಮತ್ತು ಯಾವುದೇ ವಿಪತ್ತಿಗೆ ಸಮಯೋಚಿತವಾಗಿ ಪ್ರತಿಕ್ರಿಯಿಸಲು ಅವರನ್ನು ಸಕ್ರಿಯಗೊಳಿಸುವುದು ಮುಖ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಎನ್.ಡಿ.ಎಂ.ಎ ಆಪದ ಮಿತ್ರ ಕಾರ್ಯಕ್ರಮವನ್ನು ರಚಿಸಿದೆ.

ಈ ನಿಟ್ಟಿನಲ್ಲಿ ಭಾರತ ಸರ್ಕಾರದ ಗೃಹ ಮಂತ್ರಾಲಯ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರಾಷ್ಟ್ರದಲ್ಲಿ ಸುಮಾರು 1 ಲಕ್ಷ ಸಮುದಾಯ ಸ್ವಯಂ ಸೇವಕರನ್ನು ಗುರುತಿಸಿ ವಿಪತ್ತು ನಿರ್ವಹಣಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲು ತರಬೇತಿ ನೀಡುತ್ತಿರುವುದು ಹಾಗೂ ಇದಕ್ಕಾಗಿಯೇ ಆಪದಮಿತ್ರ ಕಾರ್ಯಕ್ರಮವನ್ನು ಆಯೋಜಿಸಿದೆ. ಕರ್ನಾಟಕದಲ್ಲಿ ಈ ಯೋಜನೆಯಲ್ಲಿ ಪದೇ ಪದೇ ವಿಪತ್ತುಗಳಿಗೆ ತುತ್ತಾಗುವ 11 ಜಿಲ್ಲೆಗಳ 3400 ಸ್ವಯಂ ಸೇವಕರಿಗೆ ತರಬೇತಿ ನೀಡಲು ಕಾರ್ಯಕ್ರಮಗಳನ್ನು ಆಯೊಜಿಸಿ, ಇದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 300 ಜನ ಆಪದ ಮಿತ್ರ ಸ್ವಯಂ ಸೇವಕರಿಗೆ ತರಬೇತಿ ನೀಡಲಾಗಿರುತ್ತದೆ. ಈ 300 ಜನರಲ್ಲಿ ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತುಸೇವೆಗಳು, ರಾಜ್ಯ ಗೃಹ ರಕ್ಷಕ ದಳದ ಸಿಬ್ಬಂದಿಗಳು, ಎನ್.ಎಸ್.ಎಸ್., ಎನ್.ಸಿ.ಸಿ, ಎನ್.ವೈ.ಕೆ.ಎಸ್., ಸ್ಕೌಡ್ಸ್, ಗೈಡ್ಸ್ ಇದರ ಸ್ವಯಂ ಸೇವಕರು ಮತ್ತು ಗ್ರಾಮ ಮಟ್ಟದ ಸ್ವಯಂ ಸೇವಕರು ಪಾಲ್ಗೊಂಡಿರುತ್ತಾರೆ.

2022 ರಲ್ಲಿ ರಾಜ್ಯಾದ್ಯಂತ 11 ಜಿಲ್ಲೆಗಳಲ್ಲಿ ಆಪದ ಮಿತ್ರ ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮವು ಪ್ರಾರಂಭಗೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರತ್ಕಲ್ ಎನ್.ಐ.ಟಿ.ಕೆ ಸಂಸ್ಥೆಯ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಸಭಾ ಭವನದಲ್ಲಿ 2 ತಂಡಗಳಿಗೆ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಸಭಾಂಗಣದಲ್ಲಿ ಒಂದು ತಂಡ ಸೇರಿದಂತೆ ಒಟ್ಟು 300 ಜನ ಸ್ವಯಂ ಸೇವಕರಿಗೆ ತರಬೇತಿ ನೀಡಲಾಗಿರುತ್ತದೆ. 12 ದಿನಗಳ ತರಬೇತಿ ಕಾರ್ಯಗಾರದಲ್ಲಿ ವಿಪತ್ತು ನಿರ್ವಹಣೆ, ಭೂಕಂಪ, ಭೂಕುಸಿತ, ಪ್ರವಾಹ, ಸುನಾಮಿ, ಚಂಡಮಾರುತ, ಪ್ರಥಮ ಚಿಕಿತ್ಸೆ, ಅಗ್ನಿ ಮುಂಜಾಗ್ರತೆ, ರಾಸಾಯನಿಕ ವಿಪತ್ತುಗಳ ನಿರ್ವಹಣೆ, ಮುಂತಾದ ವಿಪತ್ತುಗಳ ಕುರಿತು ಉಪನ್ಯಾಸ, ಪ್ರಾತ್ಯಕ್ಷಿಕೆ, ಪ್ರಾಯೋಗಿಕ ತರಬೇತಿಗಳಾದ ಬೋಟ್ ರಕ್ಷಣಾ ಕಾರ್ಯಾಚರಣೆ, ರೋಪ್ ರಕ್ಷಣಾ ಕಾರ್ಯಾಚರಣೆ, ವಿವಿಧ ರಕ್ಷಣಾ ಉಪಕರಣಗಳ ಕುರಿತು ತರಬೇತಿ ನೀಡಲಾಗಿರುತ್ತದೆ.

ತರಬೇತಿ ಪಡೆದ ಪ್ರತಿ ಸ್ವಯಂಸೇವಕರಿಗೂ ತರಬೇತಿ ಪೂರ್ಣಗೊಂಡ ಬಳಿಕ ತರಬೇತಿಯ ಪ್ರಮಾಣ ಪತ್ರದೊಂದಿಗೆ, ಗುರುತಿನ ಚೀಟಿಗಳನ್ನು, ವಿಪತ್ತು ನಿರ್ವಹಣೆಯ ಕೈಪಿಡಿಗಳನ್ನು ವಿತರಿಸಲಾಗಿರುತ್ತದೆ. ಇದೀಗ ಸಮುದಾಯ ಮಟ್ಟದಲ್ಲಿ ವಿಪತ್ತುಗಳಲ್ಲಿ ಆಪದಮಿತ್ರ ಸ್ವಯಂ ಸೇವಕರು ಕಾರ್ಯನಿರ್ವಹಿಸಲು  ವಿಪತ್ತು ನಿರ್ವಹಣೆಯ ಕಿಟ್ ಗಳನ್ನು ವಿತರಿಸಲಾಗುತ್ತಿರುವುದು. ಇದರಲ್ಲಿ ಸ್ವಯಂ ರಕ್ಷಣೆಗಾಗಿ ಹೆಲ್ಮೆಟ್, ಗಂ ಬೂಟ್, ಲೈಫ್ ಜಾಕೆಟ್, ರೈನ್ ಕೋಟ್, ಟಾರ್ಚ್ ಮೊದಲಾದ ಸಾಮಾಗ್ರಿಗಳನ್ನು ವಿತರಿಸಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಆಪದಮಿತ್ರ ಯೋಜನೆಯಡಿ ಜಿಲ್ಲೆಯ ಸ್ವಯಂ ಸೇವಕರಿಗೆ ವಿಪತ್ತು ನಿರ್ವಹಣಾ ಕಿಟ್ ವಿತರಣೆ Rating: 5 Reviewed By: karavali Times
Scroll to Top