ಮಂಗಳೂರು, ಅಕ್ಟೋಬರ್ 09, 2026 (ಕರಾವಳಿ ಟೈಮ್ಸ್) : ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ ಚಟುವಟಿಕೆಗೆ ಪ್ರೋತ್ಸಾಹಿಸುವುದನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಅ 9 ರಂದು ನಡೆದ ಲಿಂಗತ್ವ ಅಲ್ಪಸಂಖ್ಯಾತರ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ವೇಳೆ ಮಂಗಳಮುಖಿಯರು ನಿಂತು ವಾಹನ ಸವಾರರಿಗೆ ತೊಂದರೆ ಮಾಡುವ ಬಗ್ಗೆ ಹಲವಾರು ದೂರುಗಳು ಕೇಳಿ ಬಂದಿವೆ. ಈ ನಿಟ್ಟಿನಲ್ಲಿ ಆರಂಭಿಕ ಹಂತದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲದಂತೆ ಅರಿವು ಮೂಡಿಸಬೇಕು. ಮುಂದಿನ ದಿನಗಳಲ್ಲಿ ಇದೇ ರೀತಿ ಸಮಸ್ಯೆ ಮುಂದುವರಿದರೆ ಕ್ರಮ ಕೈಗೊಳ್ಳುವಂತೆ ಪೆÇಲೀಸರಿಗೆ ಸೂಚಿಸಿದರು.
ಟ್ರಾನ್ಸ್‍ಜೆಂಡರ್ ಸಂಘಟನೆಗಳ ಪ್ರತಿನಿಧಿಗಳು ಮಾತನಾಡಿ, ಹೊರ ರಾಜ್ಯದ ಮಂಗಳಮುಖಿಯರು ಮಂಗಳೂರಿಗೆ ಬಂದು ಅಕ್ರಮ ಚಟುವಟಿಕೆಗಳಲ್ಲಿ ತೊಡಗುತ್ತಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದರು.
ಮಂಗಳಮುಖಿಯರಿಗೆ ವಸತಿ ನಿವೇಶನ ಒದಗಿಸಲು 15 ಮಂದಿ ನಿವೇಶನ ರಹಿತರ ಪಟ್ಟಿಯನ್ನು ಮಹಾನಗರಪಾಲಿಕೆಗೆ ನೀಡಲಾಗಿದೆ. ಇವರಿಗೆ ಮಹಿಳಾ ಅಭಿವೃದ್ಧಿ ನಿಗಮದಿಂದ ಸ್ವ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹಧನ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಇತ್ತೀಚೆಗೆ ನಡೆದ ಸರ್ವೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 96 ಟ್ರಾನ್ಸ್‍ಜೆಂಡರ್ ವ್ಯಕ್ತಿಗಳು ನೋಂದಾಯಿಸಿರುತ್ತಾರೆ. ಇವರಿಗೆ ಪುನರ್ವಸತಿ ಒದಗಿಸಲು ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಬಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀಧರ್, ಮಂಗಳಮುಖಿ ಸಂಘಟನೆಗಳ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.












0 comments:
Post a Comment